ನ್ಯೂಯಾರ್ಕ್ , ಜೂ 09 (DaijiworldNews/MS): ಒಂದು ಸಣ್ಣ ಕ್ಲಿನಿಕಲ್ ಪ್ರಯೋಗದ ಪ್ರಾಯೋಗಿಕ ಚಿಕಿತ್ಸೆಯನ್ನು ಪಡೆದ ಪ್ರತಿಯೊಬ್ಬ ಕ್ಯಾನ್ಸರ್ ರೋಗಿಯ ದೇಹದಿಂದ ಕ್ಯಾನ್ಸರ್ ರೋಗ ಮಾಯವಾಗಿದ್ದು, ಕಿಮೋಥೆರಪಿ ಸಹಿತ ಬೇರೆ ಯಾವ ಚಿಕಿತ್ಸೆ ಇಲ್ಲದೆ ಕೇವಲ ಔಷದಿಯಿಂದಲೇ ಈ ಒಂದು ಪವಾಡ ನಡೆದಿದೆ.
ಔಷಧಿ ಪ್ರಯೋಗದಲ್ಲಿ ಪ್ರತಿ ರೋಗಿಯ ದೇಹದಿಂದ 'ಇತಿಹಾಸದಲ್ಲಿ ಮೊದಲ ಬಾರಿಗೆ' ಕ್ಯಾನ್ಸರ್ ಕಣ್ಮರೆಯಾಗಿದ್ದು, ಜಗತ್ತಿಗೆ ಇದೊಂದು ಪ್ರಯೋಗ ಆಶಾದಾಯಕದಂತೆ ಪರಿಣಮಿಸಿದೆ.
ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್ ನಡೆಸಿದ ಸಣ್ಣ ಕ್ಲಿನಿಕಲ್ ಪ್ರಯೋಗದಲ್ಲಿ, ಗುದನಾಳದ ಕ್ಯಾನ್ಸರ್ ನಿಂದ ಬಳಲುತ್ತಿದ್ದ 18 ರೋಗಿಗಳು ಸುಮಾರು ಆರು ತಿಂಗಳ ಕಾಲ ದೋಸ್ಟಾರ್ಲಿಮಾಬ್ ಎಂಬ ಔಷಧಿಯನ್ನು ತೆಗೆದುಕೊಂಡಿದ್ದು ಕೊನೆಯಲ್ಲಿ, ಪ್ರತಿಯೊಬ್ಬರ ದೇಹದಲ್ಲಿ ಕ್ಯಾನ್ಸರ್ ಗೆಡ್ಡೆಗಳು ಕಣ್ಮರೆಯಾಗಿತ್ತು.
ನ್ಯೂಯಾರ್ಕ್ನ ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್ನ ಡಾ ಲೂಯಿಸ್ ಎ ಡಯಾಜ್ ಜೆ ಅವರು "ಕ್ಯಾನ್ಸರ್ ಇತಿಹಾಸದಲ್ಲಿ ಇದು ಮೊದಲ ಬಾರಿಗೆ ಸಂಭವಿಸಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.
ತಜ್ಞರ ಪ್ರಕಾರ, ದೋಸ್ಟಾರ್ಲಿಮಾಬ್ ಪ್ರಯೋಗಾಲಯ-ಉತ್ಪಾದಿತ ಅಣುಗಳೊಂದಿಗೆ ಔಷಧವಾಗಿದೆ ಮತ್ತು ಇದು ಮಾನವ ದೇಹದಲ್ಲಿ ಬದಲಿ ಪ್ರತಿಕಾಯಗಳಾಗಿ ಕಾರ್ಯನಿರ್ವಹಿಸುತ್ತದೆ.
ಪ್ರಾಯೋಗಿಕ ಚಿಕಿತ್ಸೆಯ ಬಳಿಕ ಕ್ಯಾನ್ಸರ್ ಪತ್ತೆಗಾಗಿ ಮಾಡುವ ದೈಹಿಕ ಪರೀಕ್ಷೆ , ಎಂಡೋಸ್ಕೋಪಿ ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ ಅಥವಾ ಪಿಇಟಿ ಸ್ಕ್ಯಾನ್ ಗಳು ಅಥವಾ ಎಮ್ ಆರ್ ಐ ಸ್ಕ್ಯಾನ್ ಗಳಲ್ಲಿ ರೋಗ ಪತ್ತೆಯಾಗಿಲ್ಲ, ಹೀಗಾಗಿ ದೋಸ್ಟಾರ್ಲಿಮಾಬ್ ಅತ್ಯಂತ ಮಾರಕ ಸಾಮಾನ್ಯ ಕ್ಯಾನ್ಸರ್ಗೆ 'ಸಂಭಾವ್ಯ' ಚಿಕಿತ್ಸೆಯಾಗಬಲ್ಲದು ಎಂಬುದನ್ನು ಇದು ಸಾಬೀತುಪಡಿಸುತ್ತದೆ.
"ಈ ವರದಿಯ ಸಮಯದಲ್ಲಿ, ಯಾವುದೇ ರೋಗಿಗಳು ಕಿಮೊರಾಡಿಯೊಥೆರಪಿಯನ್ನು ಪಡೆದಿಲ್ಲ ಅಥವಾ ಶಸ್ತ್ರಚಿಕಿತ್ಸೆಗೆ ಒಳಗಾಗಿರಲಿಲ್ಲ, ಮತ್ತು ನಂತರದ ಸಮಯದಲ್ಲಿ ರೋಗ ಯಾವುದೇ ಪ್ರಗತಿ ಹೊಂದುವುದಾಗಲಿ ಅಥವಾ ಮತ್ತೆ ಮರುಕಳಿಸುವಿಕೆಯ ಪ್ರಕರಣಗಳು ವರದಿಯಾಗಿಲ್ಲ" ಎಂದು ಮಾಧ್ಯಮ ಔಟ್ಲೆಟ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಸಂಶೋಧಕರು ಬರೆದಿದ್ದಾರೆ.
ಔಷಧವನ್ನು ಪರಿಶೀಲಿಸಿದ ಕ್ಯಾನ್ಸರ್ ಸಂಶೋಧಕರು ಚಿಕಿತ್ಸೆಯು ಭರವಸೆಯಂತೆ ಕಾಣುತ್ತದೆ, ಆದರೆ ದೊಡ್ಡ ಪ್ರಮಾಣದ ಪ್ರಯೋಗದ ಅಗತ್ಯವಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.