ಪಾಕಿಸ್ತಾನ, ಜೂ 08 (DaijiworldNews/DB): ಪ್ರಯಾಣಿಕ ವಾಹನವೊಂದು 100 ಅಡಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 22 ಮಂದಿ ಮೃತಪಟ್ಟ ಘಟನೆ ಬಲೂಚಿಸ್ತಾನದ ಕಿಲ್ಲಾ ಸೈಫುಲ್ಲಾ ಬಳಿ ಬುಧವಾರ ಮುಂಜಾನೆ ನಡೆದಿದೆ.
ಮೃತರಲ್ಲಿ ಐವರು ಮಕ್ಕಳು, ಐವರು ಮಹಿಳೆಯರು ಮತ್ತು 11 ಮಂದಿ ಪುರುಷರು ಸೇರಿದ್ದಾರೆ. ಘಟನೆಯಲ್ಲಿ ಓರ್ವ ಬಾಲಕ ಗಾಯಗೊಂಡಿದ್ದಾನೆ. 23 ಮಂದಿಯನ್ನು ಹೊತ್ತ ವಾಹನವು ಲೋರಲೈನಿಂದ ಝೋಬ್ಗೆ ಸಂಚರಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಅಖ್ತರ್ಜೈ ಬಳಿ ಬೆಟ್ಟದ ತುದಿಯಿಂದ ವಾಹನವು ಪ್ರಪಾತಕ್ಕೆ ಬಿದ್ದಿದೆ. ಅಪ್ರಾಪ್ತ ಬಾಲಕ ಅದೃಷ್ಟವಶಾತ್ ಬದುಕುಳಿದಿದ್ದು, ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲೆಯ ಜಿಲ್ಲಾಧಿಕಾರಿ ಹಫೀಜ್ ಮುಹಮ್ಮದ್ ಖಾಸಿಮ್ ಹೇಳಿದ್ದಾರೆ. ಮೃತದೇಹಗಳನ್ನು ಕಿಲ್ಲಾ ಸೈಫುಲ್ಲಾ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.
ಘಟನೆಯ ಬಗ್ಗೆ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಸಂತಾಪ ಸೂಚಿಸಿದ್ದಾರೆ. ಗಾಯಾಳು ಬಾಲಕನಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಬೇಕೆಂದು ಅವರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.