ಟೆಹ್ರಾನ್, ಜೂ 08 (DaijiworldNews/DB): ಪ್ರಯಾಣಿಕರ ರೈಲು ಹಳಿ ತಪ್ಪಿ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 17 ಮಂದಿ ಸಾವನ್ನಪ್ಪಿ 50 ಮಂದಿ ಗಾಯಗೊಂಡ ಘಟನೆ ಪೂರ್ವ ಇರಾನ್ನಲ್ಲಿ ಬುಧವಾರ ಮುಂಜಾನೆ ನಡೆದಿದೆ.
ರೈಲಿನಲ್ಲಿ ಸುಮಾರು 350 ಮಂದಿ ಪ್ರಯಾಣಿಕರು ಸಂಚರಿಸುತ್ತಿದ್ದರು. ರಾಜಧಾನಿ ಟೆಹ್ರಾನ್ನ ಆಗ್ನೇಯಕ್ಕೆ ಸುಮಾರು 550 ಕಿಲೋಮೀಟರ್ ದೂರದ ತಬಾಸ್ ಮರುಭೂಮಿ ಪ್ರದೇಶದ ಬಳಿ ಘಟನೆ ನಡೆದಿದೆ. ರೈಲು ಭಾಗಶ ಹಳಿ ತಪ್ಪಿದ ಕಾರಣ ಘಟನೆ ಸಂಭವಿಸಿದೆ. ಸಾವು ನೋವುಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂಬುದಾಗಿ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಘಟನೆ ನಡೆದ ಬಗ್ಗೆ ಮಾಹಿತಿ ಪಡೆದ ತತ್ಕ್ಷಣ 10 ಆಂಬ್ಯುಲೆನ್ಸ್ಗಳು ಮತ್ತು 3 ಹೆಲಿಕಾಪ್ಟರ್ಗಳೊಂದಿಗೆ ರಕ್ಷಣಾ ತಂಡಗಳು ಆಗಮಿಸಿವೆ. ಆದರೆ ಸಂವಹನ ಸೌಲಭ್ಯದ ಕೊರತೆ ಕಾಡಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಉಂಟಾಯಿತು. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ ಎಂದು ರಾಷ್ಟ್ರೀಯ ರಕ್ಷಣಾ ಸೇವೆಯ ವಕ್ತಾರ ಮೊಜ್ತಾಬಾ ಖಲೀದ್ ಸುದ್ದಿಗಾರರಿಗೆ ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಹಳಿ ತಪ್ಪುವುದಕ್ಕೂ ಮುನ್ನ ರೈಲು ಹಠಾತ್ತನೆ ಬ್ರೇಕ್ ಹಾಕಿದೆ. ಬಳಿಕ ಸಂಚಾರ ನಿಧಾನಗೊಂಡಿತ್ತು ಎನ್ನಲಾಗಿದೆ.