ಅಫ್ಘಾನಿಸ್ತಾನ, ಜೂ 09 (DaijiworldNews/DB): ಇಸ್ಲಾಂನ ಪವಿತ್ರ ಕುರಾನ್ಗೆ ಅವಮಾನ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಅಫ್ಘಾನ್ನ ಪ್ರಸಿದ್ದ ಫ್ಯಾಶನ್ ಮಾಡೆಲ್ ಮತ್ತು ಆಕೆಯ ಮೂವರು ಸಹದ್ಯೋಗಿಗಳನ್ನು ತಾಲಿಬಾನ್ ಬಂಧಿಸಿದೆ.
ಯೂಟ್ಯೂಬ್ ಕ್ಲಿಪ್, ಫ್ಯಾಶನ್ ಶೋ, ಮಾಡೆಲಿಂಗ್ ಈವೆಂಟ್ಗಳಿಗೆ ಪ್ರಸಿದ್ದರಾದ ಅಜ್ಮಲ್ ಹಖಕಿ ಅವರೇ ಬಂಧಿಸಲ್ಪಟ್ಟ ಫ್ಯಾಶನ್ ಮಾಡೆಲ್. ಬಂಧನ ಕುರಿತು ತಾಲಿಬಾನ್ ಗುಪ್ತಚರ ಸಂಸ್ಥೆಯು ಟ್ವೀಟ್ ಮಾಡಿ ವೀಡಿಯೋವೊಂದನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ಕುರಾನ್ ಪದ್ಯ ಅಥವಾ ಪ್ರವಾದಿ ಮುಹಮ್ಮದ್ ಅವರ ಮಾತುಗಳನ್ನು ಅವಮಾನಿಸುವ ಅವಕಾಶ ಯಾರಿಗೂ ಇಲ್ಲ ಎಂದು ಧಾರಿ ಭಾಷೆಯಲ್ಲಿ ಬರೆದಿದೆ. ಅಲ್ಲದೆ, ಹಖಕಿ ಮತ್ತು ಅವರ ಸಹದ್ಯೋಗಿಗಳ ಬಂಧನದ ಕುರಿತೂ ಆ ವೀಡಿಯೋದಲ್ಲಿ ತೋರಿಸಿದೆ. ನಾಲ್ವರು ಜೈಲಿನ ಸಮವಸ್ತ್ರದಲ್ಲಿ ನಿಂತುಕೊಂಡಿರುವುದನ್ನು ವೀಡಿಯೋದಲ್ಲಿ ತೋರಿಸಲಾಗಿದೆ. ಅಲ್ಲದೆ ತಾಲಿಬಾನ್ ಸರ್ಕಾರ ಮತ್ತು ಧಾರ್ಮಿಕ ವಿದ್ವಾಂಸರಲ್ಲಿ ಹಖಕಿ ಕ್ಷಮೆ ಯಾಚಿಸುವುದನ್ನೂ ಈ ವೀಡಿಯೋ ಒಳಗೊಂಡಿದೆ.
ಹಖಕಿ ಮತ್ತು ಆಕೆಯ ಸಹದ್ಯೋಗಿಗಳನ್ನು ತತ್ಕ್ಷಣ ಬಿಡುಗಡೆ ಮಾಡಬೇಕೆಂದು ಆಮ್ನೆಸ್ಟಿ ಇಂಟರ್ನ್ಯಾಶನಲ್ ಒತ್ತಾಯಿಸಿದೆ. ಆಮ್ನಿಸ್ಟಿ ಪ್ರಕಾರ, ಅಪ್ಘಾನ್ನಲ್ಲಿ ತಾಲಿಬಾನ್ ಸರ್ಕಾರ ರಚನೆಯಾದಂದಿನಿಂದ ಕಿರುಕುಳ, ದೌರ್ಜನ್ಯಗಳು ಅಲ್ಲಿನ ಜನರಿಗೆ ಹೆಚ್ಚಾಗುತ್ತಿದೆ ಎಂದಿದೆ. ಬಂಧಿತರ ಕುಟುಂಬದವರೊಂದಿಗೆ ಇನ್ನೂ ಮಾತುಕತೆ ನಡೆಸಲು ಸಾಧ್ಯವಾಗಿಲ್ಲ ಎಂದು ಆಮ್ನೆಸ್ಟಿ ಇಂಟರ್ನ್ಯಾಶನಲ್ ತಿಳಿಸಿರುವುದಾಗಿ ವರದಿಯಾಗಿದೆ.