ಕರಾಚಿ, ಜೂ 10 (DaijiworldNews/MS): ತನಗಿಂತ 31 ವರ್ಷ ಕಿರಿಯ ವಯಸ್ಸಿನ ಯುವತಿ ಜೊತೆ 3ನೇ ಮದುವೆ ಹಾಗೂ ವಿಚ್ಚೇಧನದಿಂದ ಸುದ್ದಿಯಾಗಿದ್ದ ಪಾಕಿಸ್ತಾನದ ಸಂಸದ ಅಮಿರ್ ಲಿಯಾಕತ್ ಹುಸೇನ್ ಮೃತಪಟ್ಟಿದ್ದಾರೆ.
ಅನಾರೋಗ್ಯದ ಹಿನ್ನೆಲೆ ಮನೆಯಲ್ಲಿ ಕುಸಿದು ಬಿದ್ದು ಪಾಕಿಸ್ತಾನದ ಸಂಸದ ಅಮೀರ್ ಲಿಯಾಕತ್ ಹುಸೇನ್ ನಿಧನರಾಗಿದ್ದಾರೆ.ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ಅವರನ್ನು ಅಗಾ ಖಾನ್ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪಿಟಿಐ ನಾಯಕ ಜಮಾಲ್ ಸಿದ್ದಿಕಿ ಅವರ ಸಾವನ್ನು ದೃಢೀಕರಿಸಿದ್ದಾರೆ
ಹೃದಯಸ್ತಂಭನದಿಂದ ಅಮಿರ್ ಲಿಯಾಕತ್ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ. ಕಳೆದ ಫೆಬ್ರವರಿಯಲ್ಲಿ 2ನೇ ಪತ್ನಿ ಟೂಬಾಗೆ ವಿಚ್ಚೇದನ ನೀಡಿದ 24 ಗಂಟೆಯ ಒಳಗಾಗಿ ಕೇವಲ 18 ವರ್ಷ ವಯಸ್ಸಿನ ದನಿಯಾ ಶಾ ಅವರನ್ನು ವಿವಾಹವಾಗುವ ಮೂಲಕ ಸುದ್ದಿಯಾಗಿದ್ದರು. ಅವರ ಮೂರನೇ ಮದುವೆಯೂ ಹೆಚ್ಚು ಕಾಲ ಉಳಿದಿರಲಿಲ್ಲ. ಕಳೆದ ತಿಂಗಳು ದನಿಯಾ ಶಾಗೆ ಕೂಡ ಅಮಿರ್ ಲಿಯಾಕತ್ ವಿಚ್ಛೇದನ ನೀಡಿದ್ದರು.
ಪಾಕ್ ಸಂಸತ್ತಿನ ಸ್ಪೀಕರ್ ಪರ್ವೇಜ್ ಅಶ್ರಫ್ ಕೂಡ ಅವರ ಸಾವನ್ನು ಸದನದಲ್ಲಿ ಖಚಿತಪಡಿಸಿದ್ದು, ಪಾಕಿಸ್ತಾನದ ಸಂಸತ್ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.
ಸಾಯುವ ಸಮಯದಲ್ಲಿ ಲಿಯಾಕತ್ ಅವರ ಕೋಣೆಯ ಒಳಗಿನಿಂದ ಲಾಕ್ ಆಗಿತ್ತು. ಮನೆಯ ಸಿಬ್ಬಂದಿ ಹಲವು ಬಾರಿ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎನ್ನಲಾಗಿದೆ.
ಲಿಯಾಕತ್ ಹುಸೇನ್ ಸಾವಿನ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು ಕರಾಚಿಯ ಖುದಾದಾದ್ ಕಾಲೋನಿಯಲ್ಲಿರುವ ಅವರ ಮನೆಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ ಎಂದು ಪೂರ್ವ ಕರಾಚಿ ಡಿಐಜಿ ಮುಕುದ್ದಾಸ್ ಹೈದರ್ ಹೇಳಿದ್ದಾರೆ.