ಕೊಲಂಬೋ, ಜೂ 15 (DaijiworldNews/DB): ಶ್ರೀಲಂಕಾದಲ್ಲಿ ಹಣ ಹಂಚಿಕೆ ಮಾಡುತ್ತಿದದ ಭಾರತೀಯ ಮೂಲದ ಉದ್ಯಮಿಯೊಬ್ಬರನ್ನು ಲಂಕಾ ಪೊಲೀಸರು ವಶಕ್ಕೆ ಪಡೆದು ಹೇಳಿಕೆ ದಾಖಲಿಸಿಕೊಂಡು ಬಿಡುಗಡೆ ಮಾಡಿದ್ದಾರೆ.
ಬಂಧಿತನಾಗಿ ಬಿಡುಗಡೆಗೊಂಡ ಉದ್ಯಮಿಯನ್ನು ರವೀಂದರ್ ರೆಡ್ಡಿ ಎಂದು ಗುರುತಿಸಲಾಗಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರವೀಂದರ್ ರೆಡ್ಡಿ, ಲಂಕಾದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗಾಗಿ ಆಹಾರ ಮತ್ತು ಸುಮಾರು 5 ಲಕ್ಷ ರೂ.ವರೆಗೆ ಹಣವನ್ನು ಹಂಚಿದ್ದೇನೆ. ಆದರೆ ಇದಕ್ಕಾಗಿ ಲಂಕಾ ಪೊಲೀಸರು ನನ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲಿನ ಸಿಐಡಿ ಅಧಿಕಾರಿಗಳು ರೆಕಾರ್ಡ್ ಮಾಡಿರುವ ವೀಡಿಯೋಗಳನ್ನು ನನ್ನ ಮಗನಿಗೆ ಶೇರ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ನಾನು ಶ್ರೀಲಂಕಾಗೆ ಪ್ರತಿ ತಿಂಗಳು ಹೋಗುತ್ತಿದ್ದೇನೆ. ಕಳೆದ ನಾಲ್ಕೈದು ತಿಂಗಳಿನಿಂದ ಲಂಕಾ ಭೇಟಿ ನನ್ನ ದಿನಚರಿಯಾಗಿದೆ. ಆರ್ಥಿಕ ಸಂಕಷ್ಟ ಮತ್ತು ಆಹಾರಕ್ಕೇ ಹಾಹಾಕಾರ ಎದುರಿಸುತ್ತಿರುವ ಜನರ ಸಹಾಯಕ್ಕಾಗಿ ಸುಮಾರು 21 ದಿನ ಅಲ್ಲೇ ಉಳಿದುಕೊಂಡಿದ್ದೆ ಎಂದಿದ್ದಾರೆ.
ರವೀಂದರ್ ರೆಡ್ಡಿ ಬಂಧನದ ಕುರಿತು ಸ್ಪಷ್ಟನೆ ನೀಡಿರುವ ಶ್ರೀಲಂಕಾ ಪೊಲೀಸ್ ಇಲಾಖೆಯ ಮಾಧ್ಯಮ ವಕ್ತಾರ ತಲ್ದುವಾ, ರೆಡ್ಡಿ ಅವರನ್ನು ಬಂಧಿಸಲಾಗಿಲ್ಲ. ವಶಕ್ಕೆ ಪಡೆದು ಹೇಳಿಕೆ ದಾಖಲಿಸಿ ಬಿಡುಗಡೆಗೊಳಿಸಲಾಗಿದೆ ಎಂದಿದ್ದಾರೆ.