ಸಿಂಧ್, ಜೂ 21 (DaijiworldNews/DB): ಹೆರಿಗೆ ವೇಳೆ ನವಜಾತ ಶಿಶುವಿನ ತಲೆಯನ್ನು ಕತ್ತರಿಸಿ ವೈದ್ಯಕೀಯ ಸಿಬಂದಿ ತಾಯಿಯ ಗರ್ಭದೊಳಗೇ ಬಿಟ್ಟ ಆತಂಕಕಾರಿ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ತಾರ್ಪಾರ್ಕರ್ ಜಿಲ್ಲೆಯ ಗ್ರಾಮವೊಂದರ ಭೀಲ್ ಹಿಂದೂ ಮಹಿಳೆ ಹೆರಿಗೆಗಾಗಿ ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಮಹಿಳಾ ಸ್ತ್ರೀರೋಗ ತಜ್ಞರು ಇಲ್ಲದ ಕಾರಣ ಹೆರಿಗೆ ಮಾಡಿಸಿ ಅನುಭವವೇ ಇಲ್ಲದ ಆರ್ಎಚ್ಸಿ ಸಿಬಂದಿ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿ ನವಜಾತ ಶಿಶುವಿನ ತಲೆ ಕತ್ತರಿಸಿ ತಾಯಿಯ ಗರ್ಭದೊಳಗೆ ಬಿಟ್ಟಿದ್ದಾರೆ. ಮಹಿಳೆ ಪ್ರಾಣಾಪಾಯದಿಂದ ನರಳಾಡಿದಾಗ ಆಕೆಗೆ ಚಿಕಿತ್ಸೆಗೆ ಯಾವುದೇ ಸೌಲಭ್ಯವಿಲ್ಲದ ಕಾರಣ ಕೊನೆಗೆ ಆಕೆಯನ್ನು ಯೂನಿವರ್ಸಿಟಿ ಆಫ್ ಮೆಡಿಕಲ್ ಅಂಡ್ ಹೆಲ್ತ್ ಸೈನ್ಸಸ್ ಗೆ ಕರೆ ತಂದರು. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.
ತತ್ಕ್ಷಣ ವೈದ್ಯರು ನವಜಾತ ಶಿಶುವಿನ ತಲೆಯನ್ನು ಹೊರ ತೆಗೆದು ತಾಯಿಯ ಜೀವವನ್ನು ಉಳಿಸಿದ್ದಾರೆ ಎಂದು ಜಮ್ಶೊರೊದಲ್ಲಿರುವ ಲಿಯಾಕತ್ ಯೂನಿವರ್ಸಿಟಿ ಆಫ್ ಮೆಡಿಕಲ್ ಅಂಡ್ ಹೆಲ್ತ್ ಸೈನ್ಸಸ್ ನ ಸ್ತ್ರೀರೋಗ ಶಾಸ್ತ್ರ ಘಟಕದ ಮುಖ್ಯಸ್ಥ ರಾಹೀಲ್ ಸಿಕಂದರ್ ತಿಳಿಸಿದ್ದಾರೆ. ತಳೆ ಒಳಗೆ ಸಿಕ್ಕಿ ಹಾಕಿಕೊಂಡಿದ್ದರಿಂದ ತಾಯಿಯ ಗರ್ಭಾಶಯವು ಛಿದ್ರಛಿದ್ರವಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿ ತಲೆಯನ್ನು ಹೊರತೆಗೆಯಲಾಯಿತು.