ಮಿಯಾಮಿ, ಜೂ 22 (DaijiworldNews/DB): 126 ಪ್ರಯಾಣಿಕರಿದ್ದ ವಿಮಾನವೊಂದು ಲ್ಯಾಂಡ್ ಆಗುವ ವೇಳೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಗಾಯಗೊಂಡ ಘಟನೆ ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ.
ಡೊಮಿನಿಕನ್ ರಿಪಬ್ಲಿಕ್ನ ಲಾಸ್ ಅಮೇರಿಕಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫ್ಲೋರಿಡಾದ ಮಿಯಾಮಿಗೆ ರೆಡ್ ಏರ್ ವಿಮಾನವು ಸಂಚರಿಸುತ್ತಿತ್ತು. ವಿಮಾನದಲ್ಲಿ ಒಟ್ಟು 126 ಮಂದಿ ಪ್ರಯಾಣಿಸಿದ್ದರು. ವಿಮಾನ ಮಿಯಾಮಿ ನಿಲ್ದಾಣದ ರನ್ವೇ ಸಮೀಪಿಸುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ ಸಂಭಾವ್ಯ ದುರಂತವೊಂದನ್ನು ತಪ್ಪಿಸಿದ್ದಾರೆ. ವಿಮಾನದಲ್ಲಿದ್ದ ಮೂವರು ಪ್ರಯಾಣಿಕರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದ ಪ್ರಯಾಣಿಕರು ಮತ್ತು ಸಿಬಂದಿಯನ್ನು ಟರ್ಮಿನಲ್ಗೆ ಸಾಗಿಸಲಾಗಿದೆ ಎಂದು ಮಿಯಾಮಿ-ಡೇಡ್ ಏವಿಯೇಷನ್ ವಿಭಾಗದ ಸಂವಹನ ನಿರ್ದೇಶಕ ಗ್ರೆಗ್ ಚಿನ್ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ವಿಮಾನದಲ್ಲಿ ಬೆಂಕಿ ಹತ್ತಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಇದರಲ್ಲಿ ಬೆಂಕಿ ಹೊತ್ತಿಕೊಂಡಿರುವ ದೃಶ್ಯ ಮತ್ತು ಅಗ್ನಿಶಾಮಕ ದಳದವರು ಬೆಂಕಿ ನಂದಿಸುತ್ತಿರುವ ದೃಶ್ಯ ದಾಖಲಾಗಿದೆ. ಘಟನೆಗೆ ಕಾರಣವೇನೆಂಬ ಮಾಹಿತಿ ಗೊತ್ತಾಗಿಲ್ಲ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಮತ್ತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತನಿಖೆಯನ್ನು ಕೈಗೆತ್ತಿಕೊಂಡಿದೆ.