ಲಂಡನ್ , ಜೂ 24 (DaijiworldNews/MS): ಕೋವಿಡ್ -19 ಲಸಿಕೆಗಳನ್ನು ನೀಡಲು ಆರಂಭಿಸಿದ ಮೊದಲ ವರ್ಷದಲ್ಲಿ ಸುಮಾರು 2 ಕೋಟಿ ಜೀವಗಳನ್ನು ಉಳಿಸಲು ಸಾಧ್ಯವಾಗಿದೆ ಎಂದು ಅಧ್ಯಯನ ವರದಿ ಹೇಳಿದೆ.
ಶುಕ್ರವಾರ ದಿ ಲ್ಯಾನ್ಸೆಟ್ ಸಾಂಕ್ರಾಮಿಕ ರೋಗಗಳ ವೈದ್ಯಕೀಯ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಲಸಿಕೆಯೂ ಅಪಾರ ಸಂಖ್ಯೆಯ ಸಾವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಲಾಗಿದೆ.
ಜಾಗತಿಕ ಮಟ್ಟದಲ್ಲಿ ಕೋವಿಡ್-19 ವ್ಯಾಕ್ಸಿನೇಷನ್ಗಳ ಪರಿಣಾಮವನ್ನು ಅಂದಾಜಿಸಿದ ಮೊದಲನೆಯದು ಎಂದು ಹೇಳಲಾದ ಈ ಅಧ್ಯಯನವನ್ನು ಯುಕೆಯ ಇಂಪೀರಿಯಲ್ ಕಾಲೇಜ್ ಲಂಡನ್ನ ಸಂಶೋಧಕರು ಗಣಿತದ ಮಾದರಿ ಬಳಸಿ ನಡೆಸಿದ್ದಾರೆ .2020ರ ಡಿಸೆಂಬರ್ 8ರಿಂದ 2021ರ ಡಿಸೆಂಬರ್ 8ರ ಅವಧಿಯಲ್ಲಿ 185 ರಾಷ್ಟ್ರಗಳ ವರದಿಯನ್ನು ತರಿಸಿಕೊಂಡು, ಅಧ್ಯಯನ ಮಾಡಲಾಗಿದೆ. ಈ ಅಧ್ಯಯನದ ಪ್ರಕಾರ ಲಸಿಕೆ ಪಡೆದ ಬಳಿಕ ಸಾವಿನ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.
ಕೋವಿಡ್ ಸೋಂಕಿಗೆ ತುತ್ತಾಗಿ 3.4 ಕೋಟಿ ಜನರು ಸಾವಿಗೀಡಾಗುವ ಸಾಧ್ಯತೆಯಿತ್ತು. ಆದರೆ, ಲಸಿಕೆ ಪಡೆದ ಬಳಿಕ ಸಾವಿನ ಸಂಖ್ಯೆಯಲ್ಲಿ ಶೇ 63ರಷ್ಟು ಇಳಿಕೆಯಾಯಿತು ಎಂದು ವರದಿಯಲ್ಲಿ ಹೇಳಿದೆ.
2021 ರ ಅಂತ್ಯದ ವೇಳೆಗೆ ವಿಶ್ವದ ಜನಸಂಖ್ಯೆಯ 40 ಪ್ರತಿಶತದಷ್ಟು ಜನರು ಕೋವಿಡ್ ವಿರುದ್ಧ ಲಸಿಕೆ ಹಾಕುವ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಗುರಿಯನ್ನು ಪೂರೈಸಿದ್ದರೆ 5,99,300 ಜೀವಗಳನ್ನು ಉಳಿಸಬಹುದಿತ್ತು ಎಂದು ಅಧ್ಯಯನವು ಹೇಳಿದೆ.