ನಾರ್ವೆ, ಜೂ 25 (DaijiworldNews/DB): ನಾರ್ವೆ ರಾಜಧಾನಿ ಓಸ್ಲೋದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು, 14 ಮಂದಿ ಗಾಯಗೊಂಡ ಘಟನೆ ನಡೆದಿದೆ.
ಓಸ್ಲೋದ ನೈಟ್ಕ್ಲಬ್ ಹಾಗೂ ಹತ್ತಿರದ ಬೀದಿಯಲ್ಲಿ ಗುಂಡಿನ ದಾಳಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇದರಲ್ಲಿ ಹೆಚ್ಚಿನವರು ಗಂಭೀರ ಗಾಯಕ್ಕೆ ಒಳಗಾಗಿದ್ದಾರೆ. ಘಟನೆ ಸಂಬಂಧ ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ. ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ನಾರ್ವೇಜಿಯನ್ ಪೊಲೀಸರು ತಿಳಿಸಿದ್ದಾರೆ.
ಬ್ಯಾಗ್ ಹಿಡಿದುಕೊಂಡು ಬಂದ ವ್ಯಕ್ತಿಯೋರ್ವ ಏಕಾಏಕಿ ಬ್ಯಾಗ್ನಿಂದ ಬಂದೂಕು ಹೊರ ತೆಗೆದು ಗುಂಡು ಹಾರಿಸಲು ಆರಂಭಿಸಿದ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಸ್ಥಳಕ್ಕೆ ಕೂಡಲೇ ಆಂಬುಲೆನ್ಸ್ ಮತ್ತು ರಕ್ಷಣಾ ಸಿಬಂದಿ ಆಗಮಿಸಿದ್ದು, ರಕ್ಷಣಾ ಕಾರ್ಯ ನಡೆಸಿದ್ದಾರೆ. ಪಬ್ ಹೊರಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ವರದಿಯಾಗಿದೆ.