ಲಾಹೋರ್, ಜೂ 25 (DaijiworldNews/DB): ಭಯೋತ್ಪಾದನೆ ಮತ್ತು ಹಣಕಾಸು ಪ್ರಕರಣದಲ್ಲಿ 2008ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ರೂವಾರಿ ಸಾಜಿದ್ ಮಜೀದ್ ಮಿರ್ಗೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು 15 ವರ್ಷ ಜೈಲು ಶಿಕ್ಷೆ ಮತ್ತು 4 ಲಕ್ಷ ರೂ. ವಿಧಿಸಿ ತೀರ್ಪು ನೀಡಿದೆ.
ಈತ ನಿಷೇಧಿತ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಕಾರ್ಯಕರ್ತನಾಗಿದ್ದು, ಈ ತಿಂಗಳ ಆರಂಭದಲ್ಲೇ ನ್ಯಾಯಾಲಯವು ಆತನಿಗೆ ಜೈಲು ಶಿಕ್ಷೆ ತೀರ್ಪು ನೀಡಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಆಗ ಪ್ರಕಟಿಸಿರಲಿಲ್ಲ. ಇದೀಗ ಆತನಿಗೆ 15 ವರ್ಷ ಜೈಲು ಶಿಕ್ಷೆ ಮತ್ತು 4 ಲಕ್ಷ ರೂ. ದಂಡ ವಿಧಿಸಲಾಗಿದೆ. ಸುಮಾರು 40 ವರ್ಷದವನಾದ ಮಿರ್ ಕಳೆದ ಏಪ್ರಿಲ್ನಲ್ಲಿಯೇ ಬಂಧಿಸಲ್ಪಟ್ಟಿದ್ದು, ಸದ್ಯ ಕೊಟ್ ಲಕ್ಪತ್ ಜೈಲಿನಲ್ಲಿದ್ದಾನೆ ಎಂದು ಹಿರಿಯ ವಕೀಲರು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.
ಆತ ಬಂಧಿಸಲ್ಪಡುವುದಕ್ಕೂ ಮುಂಚೆ ಆತ ಮೃತಪಟ್ಟಿದ್ದಾನೆಂದೇ ಭಾವಿಸಲಾಗಿತ್ತು. ಈತ 2008ರ ಮುಂಬೈ ದಾಳಿ ಪ್ರಕರಣದಲ್ಲಿ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ಇದ್ದಾನೆ. 2005 ರಲ್ಲಿ ನಕಲಿ ಪಾಸ್ಪೋರ್ಟ್ ಬಳಸಿ ಭಾರತಕ್ಕೆ ಭೇಟಿ ನೀಡಿದ್ದ.