ನ್ಯೂಯಾರ್ಕ್, ಜೂ 27 (DaijiworldNews/DB): ಭಾರತೀಯ ಮೂಲದ ವ್ಯಕ್ತಿಯೊಬ್ಬ ಮನೆ ಬಳಿಯಲ್ಲಿ ತಮ್ಮ ಸ್ನೇಹಿತನ ಎಸ್ಯುವಿ ವಾಹನದಲ್ಲಿ ಕುಳಿತಿದ್ದಾಗ ಆತನನ್ನು ದುಷ್ಕರ್ಮಿಯೋರ್ವ ಗುಂಡಿಕ್ಕಿ ಕೊಂದ ಘಟನೆ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದಿದೆ.
ಸತ್ನಾಮ್ ಸಿಂಗ್ ಮೃತ ದುರ್ದೈವಿ. ಸೌತ್ ಓಝೋನ್ ಪಾರ್ಕ್ ವಲಯದಲ್ಲಿ ಮನೆ ಸಮೀಪ ಪಾರ್ಕಿಂಗ್ ಮಾಡಿದ್ದ ಎಸ್ಯುವಿ ವಾಹನದಲ್ಲಿ ಸತ್ಮಾಮ್ ಕುಳಿತಿದ್ದರು. ಶನಿವಾರ ಮಧ್ಯಾಹ್ನ 3:46ರ ವೇಳೆಗೆ ಬಂದೂಕುಧಾರಿಯೊಬ್ಬ ಬಂದು ಅವರ ಮೇಲೆ ಗುಂಡು ಹಾರಿಸಿದ್ದಾನೆ. ಇದರಿಂದ ಸತ್ನಾಮ್ ಸಿಂಗ್ ಅವರ ಕುತ್ತಿಗೆ ಮತ್ತು ದೇಹದ ಇತರೆ ಭಾಗಗಗಳಿಗೆ ಗಂಭೀರ ಗಾಯಗಳಾಗಿವೆ. ತತ್ಕ್ಷಣ ಅವರನ್ನು ಜಮೈಕಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ವೈದ್ಯರು ವ್ಯಕ್ತಿ ಸಾವಿಗೀಡಾಗಿದ್ದಾರೆ ಎಂದು ಘೋಷಿಸಿದರು.
ಗುಂಡು ಹಾರಿಸಿದಾತ ಕಾಲ್ನಡಿಗೆಯಲ್ಲೇ ಬಂದಿದ್ದ. ಸಿಂಗ್ ಕುಳಿತಿದ್ದ ಜೀಪ್ ಬಳಿ ಹಾದುಹೋದ ಬಿಳಿ ಬಣ್ಣದ ಸೆಡಾನ್ನಿಂದ ಶೂಟ್ ಮಾಡಲಾಗಿದೆ ಎಂದು ಅಕ್ಕಪಕ್ಕದವರು ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.
ಕೆಲವೇ ದಿನಗಳ ಹಿಂದೆ ಮೇರಿಲ್ಯಾಂಡ್ನಲ್ಲಿ ಇದೇ ರೀತಿ ಭಾರತೀಯನಿಗೆ ಗುಂಡಿಕ್ಕಿ ಕೊಂದ ಘಟನೆ ನಡೆದಿತ್ತು.