ಅಮೇರಿಕಾ, ಜೂ 30 (DaijiworldNews/MS): ನಿಗೂಢವಾದ ರಾಕೆಟ್ ಚಂದ್ರನ ಮೇಲ್ಮೈಗೆ ಅಪ್ಪಳಿಸಿ, ಎರಡು ದೊಡ್ಡ ಕುಳಿಯನ್ನು ಸೃಷ್ಟಿಸಿದ್ದು , ಈ ಉಡಾವಣೆಯ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ನಾಸಾ ವಿಜ್ಞಾನಿಗಳು ಗೊಂದಲಕ್ಕೊಳಗಾಗಿದ್ದಾರೆ.
ಚಂದ್ರನ ಮೇಲೆ ಕ್ರ್ಯಾಶ್ ಲ್ಯಾಂಡಿಂಗ್ ಆದ ನಿಗೂಢ ರಾಕೆಟ್ ಮಾಲೀಕತ್ವದ ಜವಾಬ್ದಾರಿಯನ್ನು, ಭೂಮಿಯ ಯಾವುದೇ ಬಾಹ್ಯಾಕಾಶ-ಅನ್ವೇಷಣೆ ರಾಷ್ಟ್ರಗಳು ವಹಿಸಿಕೊಂಡಿಲ್ಲ, ಹೀಗಾಗಿ ಇದರ ಉಡಾವಣೆಯ ಹಿಂದೆ ಯಾರಿದ್ದಾರೆ ಎಂದು ನಾಸಾ ವಿಜ್ಞಾನಿಗಳು ಗೊಂದಲಕ್ಕೊಳಗಾಗಿದ್ದಾರೆ. ಮಾತ್ರವಲ್ಲದೇ ಎರಡು ವಿಭಿನ್ನ ಪ್ರದೇಶಗಳಲ್ಲಿ ಏಕೆ ರಾಕೆಟ್ ಅಪ್ಪಳಿಸಿತು ಎಂದು ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದಾರೆ.
ಜೂನ್ 24 ರಂದು ನಾಸಾದ ಚಂದ್ರನ ಆರ್ಬಿಟರ್ನಿಂದ ಹಂಚಿಕೊಳ್ಳಲಾದ ಹೊಸ ಚಿತ್ರಗಳು ನಿಗೂಢ ರಾಕೆಟ್ ನಿಂದ ಚಂದ್ರನಲ್ಲಿ ಉಂಟಾಗಿರುವ ಕುಳಿಗಳ ಸ್ಥಳವನ್ನು ತೋರಿಸುತ್ತವೆ.
ಆಶ್ಚರ್ಯಕರವಾಗಿ ಎರಡು ಕುಳಿಗಳು, ಅಂದರೆ ಪೂರ್ವದ ಕುಳಿ ಸುಮಾರು 19.5 ಗಜಗಳು ಹಾಗೂ ಪಶ್ಚಿಮದ ಕುಳಿಯ ಮೇಲೆ ಸುಮಾರು 17.5 ಗಜಗಳಷ್ಟು ದೊಡ್ಡ ಕುಳಿ ಉಂಟಾಗಿದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.