ವಾಷಿಂಗ್ಟನ್ ಜು 02 (DaijiworldNews/MS): ಉದ್ಯೋಗ ಆಕಾಂಕ್ಷಿಗಳು ತಮ್ಮ ಕನಸಿನ ವೃತ್ತಿ ಪಡೆಯಲು ಒಂದು ಪರಿಪೂರ್ಣವಾದ ಸ್ವ - ವಿವರ ಅಥವಾ ರೆಸ್ಯೂಮ್ ರೆಡಿ ಮಾಡಲು ಸಾಮಾನ್ಯವಾಗಿ ಹೆಣಗಾಡುತ್ತಾರೆ. ಅಲ್ಲದೇ ಅನೇಕ ಉದ್ಯೋಗಗಳಲ್ಲಿ , ಅಭ್ಯರ್ಥಿಯ ಆಯ್ಕೆ ಮಾಡಲು ಮೊದಲ ಮಾನದಂಡ ಅತ್ಯುತ್ತಮ ರೆಸ್ಯೂಮ್ ಆಗಿರುತ್ತದೆ. ಹೀಗಿರುವಾಗ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ, ಮೈಕ್ರೋಸಾಫ್ಟ್ ಸಂಸ್ಥಾಪಕ, 66ರ ಹರೆಯದ ಬಿಲ್ ಗೇಟ್ಸ್ ಅವರು, ವಿಶ್ವದಾದ್ಯಂತ ಲಕ್ಷಾಂತರ ಯುವ ಉದ್ಯೋಗ ಆಕಾಂಕ್ಷಿಗಳ ವಿಶ್ವಾಸವನ್ನು ಹೆಚ್ಚಿಸಲು ತಮ್ಮ 48 ವರ್ಷದ ಹಿಂದಿನ ರೆಸ್ಯೂಮ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅನೇಕರಿಗೆ ಸ್ಪೂರ್ತಿ ತುಂಬಿದ್ದಾರೆ.
ತಮ್ಮ ಪಾಲೋವರ್ಸ್ ಗಳಿಗೆ 1974 ಇಸವಿಯಲ್ಲಿನ ತಮ್ಮ ರೆಸ್ಯೂಮ್ ಹಂಚಿಕೊಂಡು " ಇದಕ್ಕಿಂತ ಖಂಡಿತಾ, ನಿಮ್ಮ ರೆಸ್ಯೂಮ್ ಉತ್ತಮವಾಗಿ ಕಾಣುತ್ತದೆ" ಎಂದು ಬರೆದುಕೊಂಡಿದ್ದಾರೆ
"ನೀವು ಇತ್ತೀಚಿಗೆ ಗ್ರ್ಯಾಜುವೇಟ್ ಆಗಿರಲಿ ಅಥವಾ ಕಾಲೇಜು ಡ್ರಾಪ್ಔಟ್ ಆಗಿರಲಿ, ನಿಮ್ಮ ರೆಸ್ಯೂಮ್ ನನ್ನ 48 ವರ್ಷಗಳ ಹಿಂದೆ ರೆಸ್ಯೂಮ್ ಮಾಡಿದ್ದಕ್ಕಿಂತ ಉತ್ತಮವಾಗಿ ಕಾಣುತ್ತದೆ ಎಂದು ನನಗೆ ಖಾತ್ರಿಯಿದೆ" ಎಂದು ಹುರಿದುಂಬಿಸುವ ಮಾತುಗಳನ್ನಾಡಿದ್ದಾರೆ.
ಬಿಲ್ ಗೇಟ್ಸ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ವಿಲಿಯಂ ಹೆನ್ರಿ ಗೇಟ್ಸ್ III ಹಾರ್ವರ್ಡ್ ಕಾಲೇಜಿನಲ್ಲಿ ಮೊದಲ ವರ್ಷದಲ್ಲಿದ್ದಾಗ ರೆಸ್ಯೂಮ್ ಇದಾಗಿದೆ.
ಆಪರೇಟಿಂಗ್ ಸಿಸ್ಟಂ ರಚನೆ, ಡೇಟಾಬೇಸ್ ನಿರ್ವಹಣೆ, ಕಂಪ್ಯೂಟರ್ ಗ್ರಾಫಿಕ್ಸ್ ಇತ್ಯಾದಿ ಕೋರ್ಸ್ಗಳನ್ನು ಅಭ್ಯಾಸಿಸಿರುವುದಾಗಿ ಮೈಕ್ರೋಸಾಫ್ಟ್ ದಿಗ್ಗಜ ತಮ್ಮ ರೆಸ್ಯೂಮ್ ನಲ್ಲಿ ಉಲ್ಲೇಖಿಸಿದ್ದಾರೆ.
ಹಲವಾರು ನೆಟ್ಟಿಗರು, ಬಿಲ್ ಗೇಟ್ಸ್ ಅವರ ರೆಸ್ಯೂಮ್ ಪರಿಪೂರ್ಣವಾಗಿದ್ದು ಈ ಅತ್ಯುತ್ತಮ ಸಂದೇಶ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ.