ಟೆಹರಾನ್, ಜು 02 (DaijiworldNews/DB): ದಕ್ಷಿಣ ಇರಾನ್ನಲ್ಲಿ ಶುಕ್ರವಾರ ತಡರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು, ಮೂವರು ಅಸುನೀಗಿದ್ದಾರೆ ಎಂದು ವರದಿಯಾಗಿದೆ. ಇದಲ್ಲದೆ ಯುಎಇಯ ಏಳು ದೇಶಗಳಲ್ಲಿಯೂ ಕಂಪನದ ಅನುಭವ ಉಂಟಾಗಿದೆ ಎನ್ನಲಾಗಿದೆ.
ದಕ್ಷಿಣ ಇರಾನ್ನಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3 ಪ್ರಮಾಣದಲ್ಲಿತ್ತು. ಸುಮಾರು 10 ಕಿಲೋ ಮೀಟರ್ (6.21 ಮೈಲು) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯೂರೋಪಿಯನ್ ಮೆಡಿಟರೇನಿಯನ್ ಭೂಕಂಪ ಮಾಪನ ಕೇಂದ್ರ ಮಾಹಿತಿ ನೀಡಿದೆ. ಮಧ್ಯರಾತ್ರಿ ಬಳಿಕ 1.32ರ ಸುಮಾರಿಗೆ ಕಂಪನದ ಅನುಭವವಾಗಿದೆ. ಭೂಕಂಪದಿಂದಾಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇರಾನ್ನಲ್ಲಿ ಕಂಪನ ಅನುಭವವಾಗಿ ಸ್ವಲ್ಪ ಸಮಯದ ಬಳಿಕ ಯುನೈಟೆಡ್ ಅರಬ್ ಎಮಿರೇಟ್ಸ್ನ ಏಳು ದೇಶಗಳಲ್ಲಿ ಕಂಪನ ಅನುಭವವಾಗಿದೆ. ಎರಡು ಬಾರಿ ಭೂಮಿ ಕಂಪಿಸಿದ್ದ, 2.43 ಮತ್ತು 3.13ಕ್ಕೆ ಕಂಪನದ ಅನುಭವವಾಗಿದೆ. ಯುಎಇಯಲ್ಲಿ ಕ್ರಮವಾಗಿ 4.6 ಮತ್ತು 4.4 ತೀವ್ರತೆಯ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.