ಜಿನೀವಾ (ಸ್ವಿಟ್ಜರ್ಲೆಂಡ್), ಜು 07 (DaijiworldNews/DB): ಭಾರತದ ಸುಮಾರು 10 ರಾಜ್ಯಗಳಲ್ಲಿ ಕೋವಿಡ್-19 ನ ಓಮಿಕ್ರಾನ್ ರೂಪಾಂತರದ ಹೊಸ ಉಪ-ವ್ಯತ್ಯಯ ʻBA.2.75ʼ ಪತ್ತೆಯಾಗಿದೆ ಎಂಬ ಆತಂಕಕಾರಿ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗಪಡಿಸಿದೆ.
ಈ ಕುರಿತು ಮಾಹಿತಿ ನೀಡಿದರುವ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್, ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಇದು ಪತ್ತೆಯಾಗಿದೆ. ಭಾರತದ ಸುಮಾರು ಹತ್ತು ರಾಜ್ಯಗಳಲ್ಲಿ ಪತ್ತೆಯಾಗಿದೆ ಎಂದಿದ್ದಾರೆ. ಆದರೆ ಇದನ್ನು ಭಾರತೀಯ ಆರೋಗ್ಯ ಸಚಿವಾಲಯ ಅಧಿಕೃತವಾಗಿ ಘೋಷಣೆ ಮಾಡಿಲ್ಲ ಎಂದಿದ್ದಾರೆ.
ಜಾಗತಿಕವಾಗಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಕಳೆದ ಎರಡು ವಾರಗಳ ಅವಧಿಯಲ್ಲೇ ಸುಮಾರು 30 ಪ್ರತಿಶತದಷ್ಟು ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಘೆಬ್ರೆಯೆಸಸ್ ಕಳವಳ ವ್ಯಕ್ತಪಡಿಸಿದ್ದಾರೆ.
BA.4 ಮತ್ತು BA.5 ಯುರೋಪ್ ಮತ್ತು ಅಮೆರಿಕಾದಲ್ಲಿ ಕಂಡು ಬಂದಿವೆ. ಭಾರತದಲ್ಲಿ BA.2.75 ನ ಹೊಸ ಉಪ-ವಂಶಾವಳಿಯನ್ನು ಕೂಡಾ ಕಂಡು ಹಿಡಿಯಲಾಗಿದೆ ಎಂದವರು ತಿಳಿಸಿದ್ದಾರೆ.