ಇಂಗ್ಲೆಂಡ್, ಜು 07 (DaijiworldNews/DB): ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಒಪ್ಪಿಕೊಂಡಿದ್ದು, ಇಂದೇ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಗರಣಗಳ ಆರೋಪದ ಹಿನ್ನೆಲೆಯಲ್ಲಿ ಸಂಪುಟದ ಸಚಿವರು ರಾಜೀನಾಮೆ ನೀಡುವಂತೆ ಜಾನ್ಸನ್ ಅವರನ್ನು ಒತ್ತಾಯಿಸಿದ್ದರೂ, ಅವರು ಒಪ್ಪಿರಲಿಲ್ಲ. ಬಳಿಕ 40ಕ್ಕೂ ಹೆಚ್ಚು ಸಚಿವರು ತೀವ್ರ ಒತ್ತಡ ಹೇರಿದ ಬಳಿಕ ಅವರು ರಾಜೀನಾಮೆ ನೀಡಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗಷ್ಟೇ ಹಣಕಾಸು ಸಚಿವ ಸ್ಥಾನಕ್ಕೆ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ರಾಜೀನಾಮೆ ನೀಡಿದ್ದರು. ಬಳಿಕ ಕಳೆದೆರಡು ದಿನದ ಹಿಂದಷ್ಟೇ ನೂತನ ಹಣಕಾಸು ಸಚಿವರಾಗಿ ನೇಮಕಗೊಂಡಿದ್ದ ನಾಧಿಮ್ ಜಹಾವಿ ಅವರು ಗುರುವಾರ ಜಾನ್ಸನ್ ಅವರನ್ನು ರಾಜೀನಾಮೆ ನೀಡಲು ಒತ್ತಾಯಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಂತರ ಜಾನ್ಸನ್ ರಾಜೀನಾಮೆಗೆ ಮುಂದಾಗಿದ್ದು, ಇಂದು ಸಂಜೆಯೇ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಬ್ರಿಟನ್ ಮಾಧ್ಯಮಗಳು ವರದಿ ಮಾಡಿವೆ.