ಕೊಲಂಬೋ, ಜು 10 (DaijiworldNews/DB): ಹಣಕಾಸಿನ ಮುಗ್ಗಟ್ಟಿನಿಂದ ತತ್ತರಿಸಿ ಹೋಗಿರುವ ಶ್ರೀಲಂಕಾದಲ್ಲಿ ಪ್ರತಿಭಟನಾಕಾರರು ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರ ಖಾಸಗಿ ನಿವಾಸಕ್ಕೆ ಬೆಂಕಿ ಹಚ್ಚಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ದ್ವಿಪರಾಷ್ಟ್ರದಲ್ಲಿ ಆರ್ಥಿಕತೆ ತೀರಾ ಹದಗೆಟ್ಟಿರುವುದರಿಂದ ಜನ ಊಟಕ್ಕೂ ಪರದಾಡುತ್ತಿದ್ದಾರೆ. ಕಳೆದ ಹಲವಾರು ದಿನಗಳಿಂದಲೂ ಲಂಕಾದಲ್ಲಿ ಇದೇ ಪರಿಸ್ಥಿತಿ ಇದ್ದು, ಶನಿವಾರ ಜನರ ಹಸಿವಿನ ಕಿಚ್ಚು ಒಮ್ಮೆಲೆ ಸ್ಪೋಟಗೊಂಡಿತ್ತು. ಅಧ್ಯಕ್ಷರ ನಿವಾಸದೆದರು ಸಾಗರೋಪದಾದಿಯಲ್ಲಿ ಜನ ಸೇರಿ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಅಲ್ಲದೆ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ನಿವಾಸಕ್ಕೆ ನುಗ್ಗಿ ಬೇಕಾದನ್ನು ತಿಂದಿದ್ದಾರೆ. ಜನರ ಪ್ರತಿಭಟನೆಯಿಂದಾಗಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಪಲಾಯನಗೈದಿದ್ದರು.
ಈ ಬೆಳವಣಿಗೆಯ ನಡುವೆಯೇ ಕೊಲೊಂಬೋದಲ್ಲಿರುವ ಲಂಕಾ ಪ್ರಧಾನಿ ವಕ್ರಮಸಿಂಘೆ ಅವರ ನಿವಾಸಕ್ಕೆ ಶನಿವಾರ ತಡರಾತ್ರಿ ಉದ್ರಿಕ್ತ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಪ್ರಧಾನಿಯವರ ವಾಹನಗಳಿಗೂ ಹಾನಿ ಮಾಡಿರುವುದಾಗಿ ವರದಿಯಾಗಿದೆ.ಮನೆಯ ಬಾಗಿಲನ್ನು ಮುರಿದು ಮನೆಯೊಳಗೆ ನುಗ್ಗಿ ಬೆಂಕಿ ಹಚ್ಚಲಾಗಿದೆ. ಈ ವೇಳೆ ಪೊಲೀಸರು ಅಶ್ರವಾಯು ಸಿಡಿಸಿದರೂ ಪ್ರತಿಭಟನಾಕಾರರನ್ನು ತಡೆಯಲು ಸಾಧ್ಯವಾಗಿಲ್ಲ. ಮೇ ತಿಂಗಳಲ್ಲಿ ಪ್ರಧಾನಿ ಹುದ್ದೆಗೇರಿದ ಅವರು ಎರಡೇ ತಿಂಗಳಲ್ಲಿ ನಿನ್ನೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಬಳಿಕ ಪ್ರತಿಭಟನಾಕಾರರು ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ.