ಕೊಲಂಬೋ, ಜು 11(DaijiworldNews/MS): ಶ್ರೀಲಂಕಾದ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡುವಾಗ ಬಿಟ್ಟುಹೋದ ಲಕ್ಷಾಂತರ ರೂಪಾಯಿ ಹಣವನ್ನು ಪ್ರತಿಭಟನಾಕಾರರಿಂದ ಸೋಮವಾರ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ ಎಂದು ಶ್ರೀಲಂಕಾ ಪೊಲೀಸರು ತಿಳಿಸಿದ್ದಾರೆ.
ಅಧ್ಯಕ್ಷರ ಮನೆ ಮೇಲೆ ಶ್ರೀಲಂಕಾ ಪ್ರಜೆಗಳು , ಪ್ರತಿಭಟನಾಕಾರರು ದಾಳಿ ನಡೆಸಿದಾಗ ಶ್ರೀಲಂಕಾದ ರೂಪಾಯಿ ಪ್ರಕಾರ 17.85 ದಶಲಕ್ಷ ರೂಪಾಯಿ (ಸುಮಾರು ಯುಎಸ್ ಎ ಡಾಲರ್ $50,000) ಗರಿಗರಿಯಾದ ಹೊಸ ನೋಟು ಪತ್ತೆಯಾಗಿತ್ತು. ಶನಿವಾರದಂದು ದಾಳಿ ನಡೆಸಿ ಪ್ರತಿಭಟನಾಕಾರರು ಸ್ವಾಧೀನಪಡಿಸಿಕೊಂಡ ಬಳಿಕ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಇನ್ನು ಹಣದ ಜೊತೆಯಲ್ಲೇ ಸೂಟ್ಕೇಸ್ಗಳನ್ನೂ ಬಿಟ್ಟು ಹೋಗಿದ್ದು, ಇದರಲ್ಲಿ ಅಪಾರ ಪ್ರಮಾಣದ ದಾಖಲೆ ಪತ್ರಗಳು ಲಭ್ಯವಾಗಿವೆ. 2 ಶತಮಾನಗಳಷ್ಟು ಹಳೆಯದಾದ ಈ ಕಟ್ಟಡವನ್ನು ತೊರೆದ ರಾಜಪಕ್ಸೆ ತಮ್ಮ ಖಾಸಗಿ ನಿವಾಸಕ್ಕೆ ಮಾರ್ಚ್ 31ರಂದೇ ಸ್ಥಳಾಂತರಗೊಂಡಿದ್ದರು. ಪ್ರತಿಭಟನಾಕಾರರು ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕುವ ಭೀತಿಯಿಂದ ಅಲ್ಲಿಂದಲೂ 73 ವರ್ಷದ ಗೋಟಬಯಾ ನೌಕಾ ಸಿಬ್ಬಂದಿಯ ಬೆಂಗಾವಲಿನ ಅಡಿಯಲ್ಲಿ ತಪ್ಪಿಸಿಕೊಂಡು ದೇಶದಿಂದಲೇ ಪಲಾಯನ ಮಾಡಿದ್ದರು.
ಬೋಟ್ ಮೂಲಕ ಅವರು ದ್ವೀಪ ರಾಷ್ಟ್ರದ ಮತ್ತೊಂದು ದಿಕ್ಕಿಗೆ ಪ್ರಯಾಣಿಸಿದ್ದಾರೆ. ಆದ್ರೆ, ರಾಜಪಕ್ಸೆ ಎಲ್ಲಿದ್ದಾರೆ, ಎಲ್ಲಿಗೆ ಹೋಗಿದ್ದಾರೆ ಅನ್ನೋದು ಇನ್ನೂ ಕೂಡಾ ಅಧಿಕೃತವಾಗಿ ದೃಢಪಟ್ಟಿಲ್ಲ.
ಸೋಮವಾರದಂದೂ ಕೂಡಾ ಹತ್ತಾರು ಜನರು ಇನ್ನೂ ರಾಷ್ಟ್ರಪತಿ ಭವನ, ಅಧ್ಯಕ್ಷೀಯ ಸಚಿವಾಲಯ ಮತ್ತು ಪ್ರಧಾನ ಮಂತ್ರಿಯ "ಟೆಂಪಲ್ ಟ್ರೀಸ್" ಅಧಿಕೃತ ನಿವಾಸವನ್ನು ಆಕ್ರಮಿಸಿಕೊಂಡಿದ್ದಾರೆ.ಇವರೆಲ್ಲರೂ ರಾಜಪಕ್ಸೆ ರಾಜೀನಾಮೆ ಯನ್ನು ಲಿಖಿತ ದೃಢೀಕರಣದಲ್ಲಿ ನೀಡುವಂತೆ ಆಗ್ರಹಿಸುತ್ತಿದ್ದಾರೆ.