ಇರಾನ್, ಜು 13(DaijiworldNews/MS): ಕಡ್ದಾಯವಾಗಿ ಮಹಿಳೆಯರು ಹಿಜಾಬ್ ಧರಿಸಬೇಕು ಎಂಬ ಸರ್ಕಾರದ ಕಟ್ಟುನಿಟ್ಟಿನ ನಿಯಮಗಳಿಗೆ ಇರಾನ್ ಮಹಿಳೆಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಹ್ಯಾಷ್ ಟ್ಯಾಗ್ ನೋ2ಹಿಜಾಬ್ ಎಂಬ ಅಭಿಯಾನ ಆರಂಭಿಸಿದ್ದಾರೆ. ಮಾತ್ರವಲ್ಲದೇ ಇರಾನ್ ಮಹಿಳೆಯರು ತಾವು ಹಿಜಾಬ್ಗಳನ್ನು ತೆಗೆಯುತ್ತಿರುವ ಫೋಟೋ, ವಿಡಿಯೋಗಳನ್ನು ಸಾಮಾಜಿಕ ತಾಲತಾಣದಲ್ಲಿ ಪೋಸ್ಟ್ ಮಾಡಿ ಈ ನಿಯಮಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಜುಲೈ 12ನ್ನು "ಹಿಜಾಬ್ ಮತ್ತು ಪರಿಶುದ್ಧತೆಯ ದಿನ" ಎಂದು ಇರಾನ್ ನಲ್ಲಿ ಷೋಷಿಸಲಾಗಿದ್ದು ಮಹಿಳೆಯರು ಹಿಜಾಬ್ ಧರಿಸಲು ಒತ್ತಾಯಿಸುವ ನಿಯಮಗಳ ಕುರಿತು ಕಾರ್ಯಕ್ರಮ ಆಯೋಜಿಸಗಿತ್ತು.
ಮಹಿಳೆಯರ ಹಕ್ಕುಗಳನ್ನು ಇರಾನ್ನಲ್ಲಿ ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದ್ದು, ಅಲ್ಲಿನ ಎಲ್ಲಾ ಮಹಿಳೆಯರಿಗೆ ಸಾರ್ವಜನಿಕವಾಗಿ ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ್. ಹಿಜಾಬ್ ಧರಿಸದಿರುವವರು ಅಥವಾ ಹಿಜಾಬ್ ಧರಿಸಿ ತಮ್ಮ ಕೂದಲನ್ನು ಪ್ರದರ್ಶಿಸುವವರಿಗೆ ದಂಡದಿಂದ ಹಿಡಿದು ಜೈಲು ಶಿಕ್ಷೆಯವರೆಗೆ ಸಜೆಯನ್ನು ನೀಡಲಾಗುತ್ತದೆ
ಪ್ರಮುಖ ಜಾಗತಿಕ ಮಾನವ ಹಕ್ಕುಗಳ ಸಂಘಟನೆಯಾದ ಅಮ್ನೆಸ್ಟಿ ಇಂಟರ್ನ್ಯಾಶನಲ್ನ, ಅಲನ್ ಹೊಗಾರ್ತ್ ಅವರು ದಿ ಇಂಡಿಪೆಂಡೆಂಟ್ಗೆ ಪ್ರತಿಕ್ರಿಯಿಸಿ, " ಈ ರೀತಿಯ ನಿರಂಕುಶಾಧಿಕಾರವು ಇರಾನ್ನ ಹೆಚ್ಚಿನ ಯುವಜನತೆಯ ದೃಷ್ಟಿಕೋನದಲ್ಲಿ ಸಮಾನತೆಯನ್ನು ಹೊಂದಿಲ್ಲ, ಲೈಂಗಿಕ ತಾರತಮ್ಯದ ಕಾನೂನುಗಳ ವಿರುದ್ಧ ನಿಲುವು ತೆಗೆದುಕೊಳ್ಳುತ್ತಿರುವ ಕೆಚ್ಚೆದೆಯ ಮಹಿಳೆಯರಿಗೆ ಅವರಿಗೆ ಮುಂದೊದಗುವ ಅಪಾಯಗಳನ್ನು ಬಲ್ಲವರಾಗಿದ್ದಾರೆ. ಮೊನಿರೆ, ಯಸಮನ್ ಮತ್ತು ಮೊಜ್ಗನ್ ಈ ಮೂರು ಯುವ ಇರಾನಿನ ಮಹಿಳೆಯರು ಪ್ರಸ್ತುತ 30 ವರ್ಷಗಳಿಗೂ ಹೆಚ್ಚು ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಇರಾನ್ನಲ್ಲಿರುವ ಎಲ್ಲಾ ಮಹಿಳೆಯರಿಗೆ ಯಾವ ವಸ್ತ್ರ ಧರಿಸಬೇಕೆಂದು ಆಯ್ಕೆ ಮಾಡುವ ಸ್ವಾತಂತ್ರ್ಯವಿದೆ" ಎಂದು ಹೇಳಿದ್ದಾರೆ
ಜುಲೈ 12 ರಂದು ಇರಾನಿನ ರಾಜ್ಯ ದೂರದರ್ಶನವು ಹಿಜಾಬ್ ಮತ್ತು ಪರಿಶುದ್ಧತೆಯ ಸಮಾರಂಭದ ವೀಡಿಯೊವನ್ನು ಪ್ರಸಾರ ಮಾಡಿತ್ತು. ಇದರಲ್ಲಿ , 13 ಮಹಿಳೆಯರು ಹಸಿರು ಹಿಜಾಬ್ ಮತ್ತು ಉದ್ದನೆಯ ಬಿಳಿ ನಿಲುವಂಗಿಯನ್ನು ಧರಿಸಿ ಕುರಾನ್ನ ಸಾಲುಗಳನ್ನು ಉಲ್ಲೇಖಿಸಿ, ಮಹಿಳೆಯರನ್ನು ವಸ್ತ್ರದಿಂದ ಸಂಪೂರ್ಣವಾಗಿ ದೇಹ ಮುಚ್ಚುವ ಮಹತ್ವವನ್ನು ಒತ್ತಿ ಹೇಳುವ ನಿರೂಪಣೆಗೆ ನೃತ್ಯ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯಕ್ಕೆ ಗುರಿಯಾಗಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ಇದನ್ನು ವಿರೋಧಿಸಿ ಮಹಿಳೆಯರು ಮತ್ತು ಕೆಲವೆಡೆ ಪುರುಷರು ಕೂಡಾ, ಮಹಿಳೆಯರು ಸಾರ್ವಜನಿಕವಾಗಿ ಹಿಜಾಬ್ ಧರಿಸುವುದನ್ನು ಕಡ್ಡಾಯಗೊಳಿಸುವ ಇರಾನ್ನ ಕಾನೂನಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.
ಕೆಲವು ವೀಡಿಯೋಗಳಲ್ಲಿ ಮಹಿಳೆಯರು ಸ್ಕಾರ್ಫ್ ಮತ್ತು ಶಾಲುಗಳನ್ನು ರಸ್ತೆಯಲ್ಲಿ ಎಸೆಯುವುದನ್ನು ತೋರಿಸಿದೆ. ಮಹಿಳೆಯರು ಸಾರ್ವಜನಿಕ ಸಾರಿಗೆಯಲ್ಲಿ , ಅಂಗಡಿಗಳಲ್ಲಿ ಹಿಜಾಬ್ ಇಲ್ಲದೆ ಕಾಣಿಸಿಕೊಂಡು ಈ ಕಾನೂನನ್ನು ವಿರೋಧಿಸಿದ್ದಾರೆ.