ಕೊಲೊಂಬೋ, ಜು 14 (DaijiworldNews/MS) : ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಹಾಗೂ ಅವರ ಪತ್ನಿ ಸಿಂಗಾಪುರದಲ್ಲಿಯೇ ತಂಗಲಿದ್ದು, ಮಧ್ಯಪ್ರಾಚ್ಯಕ್ಕೆ ಪಲಾಯನ ಮಾಡುವುದಿಲ್ಲವೆಂದು ವರದಿಗಳಾಗಿವೆ.
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ಸಿಡಿದೆದ್ದು ಅಲ್ಲಿನ ಸಾರ್ವಜನಿಕರು ಸಾಮೂಹಿಕ ಪ್ರತಿಭಟನೆಗಳ ನಡುವೆ ಗೊಟಬಯ ಒಂದು ದಿನ ಮುಂಚಿತವಾಗಿ ಮಾಲ್ಡೀವ್ಸ್ಗೆ ಪಲಾಯನ ಮಾಡಿದ್ದರು.
ರಾಜಪಕ್ಸ ಹಾಗೂ ಅವರ ಪತ್ನಿ ಮಾಲ್ಡೀವ್ಸ್ನ ಮಾಲೆಯಿಂದ ಸೌದಿ ಏರ್ಲೈನ್ಸ್ ವಿಮಾನದ ಮೂಲಕ ಸಿಂಗಾಪುರಕ್ಕೆ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಪಕ್ಸ ಅವರು ಮಧ್ಯಪ್ರಾಚ್ಯಕ್ಕೆ ಪಲಾಯನ ಮಾಡಬಹುದು ಎಂಬ ಮಾತುಗಳು ಹರಿದಾಡಿದ್ದವು. ಆದರೆ, ವಿವಿಧ ಮಾಧ್ಯಮಗಳ ವರದಿಯ ಪ್ರಕಾರ, ರಾಜಪಕ್ಸ ಹಾಗೂ ಅವರ ಪತ್ನಿ ಸಿಂಗಾಪುರದಲ್ಲಿಯೇ ಉಳಿದುಕೊಳ್ಳಲಿದ್ದಾರೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದ್ದ ರಾಜಪಕ್ಸ ಶ್ರೀಲಂಕಾದಿಂದ ಪರಾರಿಯಾಗಿ ಮಾಲ್ಡೀವ್ನಲ್ಲಿ ತಂಗಿದ್ದರು. ಮಾಲ್ಡೀವ್ನಲ್ಲಿಯೂ ಪ್ರತಿಭಟನೆಯನ್ನು ಎದುರಿಸಿದ ಅವರು ಈಗ ಸಿಂಗಾಪುರಕ್ಕೆ ಹಾರಿದ್ದಾರೆ. ಇತ್ತ ಶ್ರೀಲಂಕಾದಲ್ಲಿ ರಾಜಪಕ್ಸ ರಾಜೀನಾಮೆಗೆ ಒತ್ತಾಯಿಸಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ.
ಅವರು ಬುಧವಾರದೊಳಗೆ ರಾಜೀನಾಮೆ ನೀಡುವುದಾಗಿ ಹಿಂದೆ ವಾಗ್ದಾನ ಮಾಡಿದ್ದರು, ಆದರೆ ಇದುವರೆಗೆ ಔಪಚಾರಿಕವಾಗಿ ರಾಜೀನಾಮೆ ಸಲ್ಲಿಸಲು ವಿಫಲರಾಗಿದ್ದಾರೆ.
ಅಧ್ಯಕ್ಷರಾಗಿ ಕಾನೂನು ಕ್ರಮದಿಂದ ವಿನಾಯಿತಿಯನ್ನು ಹೊಂದಿರುವ ನಾಯಕ, ಒಳಬರುವ ಆಡಳಿತದಿಂದ ಬಂಧನದ ಸಾಧ್ಯತೆಯನ್ನು ತಪ್ಪಿಸಲು ರಾಜೀನಾಮೆ ನೀಡುವ ಮೊದಲು ಶ್ರೀಲಂಕಾವನ್ನು ತೊರೆಯಲು ಬಯಸಿದ್ದರು ಎಂದು ಅನುಮಾನ ವ್ಯಕ್ತವಾಗಿದೆ.