ನವದೆಹಲಿ, ಜು 17 (DaijiworldNews/DB): ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೈದರಾಬಾದ್ಗೆ ಆಗಮಿಸಬೇಕಿದ್ದ ಇಂಡಿಗೋ ವಿಮಾನ ಪಾಕಿಸ್ತಾನದ ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಭಾನುವಾರ ನಡೆದಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ನ ಶಾರ್ಜಾದಿಂದ 6ಇ-1406 ನಂಬರ್ನ ಇಂಡಿಗೋ ವಿಮಾನ ಹೈದರಾಬಾದ್ ಕಡೆಗೆ ಪ್ರಯಾಣಿಸುತ್ತಿತ್ತು. ಈ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತತ್ಕ್ಷಣ ಈ ವಿಚಾರ ಪೈಲಟ್ ಗಮನಕ್ಕೆ ಬಂದಿದ್ದು, ಕೂಡಲೇ ವಿಮಾನವನ್ನು ಪಾಕಿಸ್ತಾನದ ಕರಾಚಿಗೆ ತಿರುಗಿಸಿ ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಹೈದರಾಬಾದ್ಗೆ ಪ್ರಯಾಣಿಕರನ್ನು ಕರೆ ತರಲು ಬೇರೆ ವಿಮಾನವನ್ನು ಕರಾಚಿಗೆ ಕಳುಹಿಸಿಕೊಡಲಾಯಿತು ಎಂದು ಇಂಡಿಗೋ ವಿಮಾನ ಸಂಸ್ಥೆ ತಿಳಿಸಿರುವುದಾಗಿ ವರದಿಯಾಗಿದೆ.
ವಿಮಾನದ ಎರಡನೇ ಎಂಜಿನ್ನಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಕಳೆದೆರಡು ವಾರದಲ್ಲಿ ಭಾರತದ ಎರಡನೇ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದಂತಾಗಿದೆ. ಜುಲೈ ತಿಂಗಳಾರಂಭದಲ್ಲಿ ದೆಹಲಿಯಿಂದ ದುಬೈಗೆ ತೆರಳುತ್ತಿದ್ದ ಸ್ಪೈಸ್ಜೆಟ್ ವಿಮಾನವು ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.