ಬ್ರಿಟನ್,ಜು 20 (DaijiworldNews/MS): ಭಾರತ ಮೂಲದ ರಿಷಿ ಸುನಕ್ , ಬ್ರಿಟನ್ ಪ್ರಧಾನಿ ಹುದ್ದೆ ಏರಲು ಮತ್ತೊಂದು ಹೆಜ್ಜೆ ಮುಂದಡಿ ಇಟ್ಟಿದ್ದಾರೆ. ಮಂಗಳವಾರ ನಡೆದ ನಾಲ್ಕನೇ ಸುತ್ತಿನ ಸ್ಪರ್ಧೆಯಲ್ಲಿ ಯುಕೆ ಮಾಜಿ ಹಣಕಾಸು ಸಚಿವ ರಿಷಿ ಮುಂಚೂಣಿಯಲ್ಲಿದ್ದಾರೆ.
ಕರ್ನರ್ವೇಟಿವ್ ಪಕ್ಷದ ಸಂಸದರು ನಾಲ್ಕನೇ ಸುತ್ತಿನ ಮತದಾನ ನಡೆಸಿದ್ದು ಕಣದಲ್ಲಿದ್ದ ರಿಷಿಗೆ 115 ಮತ, ಹಾಲಿ ವಾಣಿಜ್ಯ ಸಚಿವ ಪೆನ್ನಿ ಮಾರ್ಡಾಂಟ್ ಅವರಿಗೆ 92, ಹಾಲಿ ವಿದೇಶಾಂಗ ಸಚಿವ ಲಿಝ್ ಟ್ರಸ್ 82 ಹಾಗೂ ಕೆಮಿ ಬಡೆನೊಚ್ ಅವರಿಗೆ 59 ಮತ ಬಂದಿವೆ.
ನಿಯಮಗಳ ಪ್ರಕಾರ, ಕಡಿಮೆ ಮತ ಗಳಿಸಿದ ಕೆಮಿ ಬಡೆನೊಚ್, ಸ್ಪರ್ಧೆಯಿಂದ ದೂರ ಸರಿದಿದ್ದಾರೆ. ಹಾಗಾಗಿ, ಮುಂದಿನ ಸುತ್ತಿಗೆ ರಿಷಿ ಸುನಕ್, ಪೆನ್ನಿ ಹಾಗೂ ಟ್ರಸ್ ಮಾತ್ರವೇ ಉಳಿದಿದ್ದಾರೆ.
ಪ್ರಧಾನಿ ಬೋರಿಸ್ ಜಾನ್ಸನ್ ಜುಲೈ 7ರಂದು ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಿಸಿದ್ದರು. ಸೆಪ್ಟೆಂಬರ್ 5ರಂದು ಹೊಸ ನಾಯಕನ ಆಯ್ಕೆಯಾಗುವವರೆಗೂ ಅವರು ಪ್ರಧಾನಿಯಾಗಿ ಮುಂದುವರಿಯುತ್ತಾರೆ.