ಕ್ಯಾಲಿಫೋರ್ನಿಯಾ, ಜು 24 (DaijiworldNews/DB): ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಉಂಟಾಗಿರುವ ಭಾರೀ ಕಾಡ್ಗಿಚ್ಚಿನಿಂದಾಗಿ ಮೆರಿಪೊಸಾ ಕೌಂಟಿ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಯೊಸೆಮಿಟ್ ರಾಷ್ಟ್ರೀಯ ಉದ್ಯಾನವನದ ಬಳಿ ಬೆಂಕಿ ವೇಗವಾಗಿ ಆವರಿಸಿಕೊಳ್ಳುತ್ತಿದ್ದು, ಇದೇ ಮೊದಲು ಇಷ್ಟು ದೊಡ್ಡ ಮಟ್ಟದಲ್ಲಿ ಕಾಡ್ಗಿಚ್ಚು ಉಂಟಾಗಿದೆ ಎನ್ನಲಾಗುತ್ತಿದೆ. ಪರಿಣಾಮವಾಗಿ ಆ ಪ್ರದೇಶದಲ್ಲಿ ಗವರ್ನರ್ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಶುಕ್ರವಾರ ಮಧ್ಯಾಹ್ನವೇ ಕಾಡ್ಗಿಚ್ಚು ಆರಂಭವಾಗಿದ್ದು, ಸುತ್ತಲಿನ ಪ್ರದೇಶಗಳಿಗೂ ವ್ಯಾಪಿಸಿದೆ.
ಅರಣ್ಯ ಸಮೀಪ ವಾಸವಾಗಿರುವವರನ್ನು ಈಗಾಗಲೇ ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, 2,000ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈಗಾಗಲೇ ಎಕರೆಗಟ್ಟಲೆ ಪ್ರದೇಶವನ್ನು ಕಾಡ್ಗಿಚ್ಚು ಆಹುತಿ ಪಡೆದಿದೆ ಎಂದು ಕ್ಯಾಲಿಫೋರ್ನಿಯಾ ಅರಣ್ಯ ಮತ್ತು ಅಗ್ನಿಶಾಮಕ ರಕ್ಷಣಾ ಇಲಾಖೆ ತಿಳಿಸಿದೆ.
ಕಾಡ್ಗಿಚ್ಚಿನ ಭೀಕರತೆ ಆತಂಕ ಸೃಷ್ಟಿಸಿದ್ದು, ಸುತ್ತಮುತ್ತಲು ವಾಸಿಸುವ 6,000ಕ್ಕೂ ಹೆಚ್ಚು ನಾಗರಿಕರಿಗೆ ತತ್ಕ್ಷಣ ಸ್ಥಳಾಂತರಗೊಳ್ಳುವಂತೆ ಆದೇಶಿಸಲಾಗಿದೆ ಎಂದು ಸಿಯೆರಾ ರಾಷ್ಟ್ರೀಯ ಅರಣ್ಯದ ವಕ್ತಾರ ಡ್ಯಾನಿಯಲ್ ಪ್ಯಾಟರ್ಸನ್ ತಿಳಿಸಿದ್ದಾರೆ. 400ಕ್ಕೂ ಹೆಚ್ಚು ಅಗ್ನಿಶಾಮಕದಳ, ಹೆಲಿಕಾಪ್ಟರ್, ವಿಮಾನಗಳ ಮೂಲಕ ಬೆಂಕಿ ನಂದಿಸುವ ಕಾರ್ಯ ನಡೆಸಲಾಗುತ್ತಿದೆ.