ಮಾಸ್ಕೋ, ಜು 25 (DaijiworldNews/MS): ಮಾಸ್ಕೋ ಚೆಸ್ ಓಪನ್ ಟೂರ್ನಮೆಂಟ್ನಲ್ಲಿ ಚೆಸ್ ಆಡುವ ರೋಬೋಟ್ನ 'ಆಂಡ್ರಾಯ್ಡ್ ಗ್ಯಾಂಬಿಟ್' ಹಾಗೂ ಏಳು ವರ್ಷದ ಮಗುವಿನ ನಡುವೆ ಈ ಸ್ವರ್ಧೆ ನಡೆಯುತ್ತಿದ್ದಾಗ ಬಾಲಕನ ಬೆರಳನ್ನು ರೋಬೋಟ್ ಮುರಿದ ಅಘಾತಕಾರಿ ಘಟನೆಯೊಂದು ನಡೆದಿದೆ.
ರೋಬೋಟ್ ಒಂದು ಮಗುವಿನ ಮೇಲೆ ದಾಳಿ ಮಾಡುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜುಲೈ 19 ರಂದು ರಷ್ಯಾದಲ್ಲಿ ನಡೆದ ಮಾಸ್ಕೋ ಚೆಸ್ ಓಪನ್ ಟೂರ್ನಿ ಸಂದರ್ಭದಲ್ಲಿ ಚೆಸ್ ಆಡುವ ರೋಬೋಟ್ ಏಳು ವರ್ಷದ ಕ್ರಿಸ್ಟೋಫರ್ ಎಂಬ ಬಾಲಕನ ಬೆರಳು ಹಿಡಿದು ಬಲವಾಗಿ ಹಿಂಡಿರುವುದನ್ನು ವಿಡಿಯೊದಲ್ಲಿ ಕಾಣಬಹುದು.
ಬಾಲಕನ ಆತುರದಿಂದ ಈ ಘಟನೆ ನಡೆದಿದೆ. ರೋಬೋಟ್ ತನ್ನ ಕ್ರಿಯೆಯನ್ನು ಪೂರ್ಣಗೊಳಿಸಲು ಅಗತ್ಯವಾದ ಸಮಯಕ್ಕಾಗಿ ಕಾಯದೆ ಬಾಲಕ ತ್ವರಿತವಾಗಿ ಪಾನ್ ಮೂವ್ ಮಾಡಲು ಮುಂದಾದಾಗ ಈ ಘಟನೆ ಸಂಭವಿಸಿದೆ.
ರೋಬೋ ಜೊತೆಗೆ ಆಡುವಾಗ ಕೆಲವು ಸುರಕ್ಷತಾ ನಿಯಮಗಳಿದ್ದು ಬಾಲಕ ಆತುರದಿಂದ ಅದನ್ನು ಉಲ್ಲಂಘಿಸಿದ್ದಾನೆ. ರೋಬೋ ಮೂವ್ಗೆ ಕಾಯಬೇಕೆಂದು ಗಮನಿಸಲಿಲ್ಲ. ಇದು ಅತ್ಯಂತ ಅಪರೂಪದ ಪ್ರಕರಣವಾಗಿದೆ. ಆ ಬಾಲಕ ಚೇತರಿಸಿಕೊಂಡಿದ್ದು ಬೆರಳಿಗೆ ಪ್ಲಾಸ್ಟರ್ ಹಾಕಲಾಗಿದೆ ಎಂದು ಸಂಘಟಕರು ಹೇಳಿದ್ದಾರೆ.