ಸಿಂಗಾಪುರ, ಜು 27 (DaijiworldNews/MS): ಸಿಂಗಾಪುರ ಸರ್ಕಾರವು ಶ್ರೀಲಂಕಾದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರಿಗೆ ಹೊಸ ವೀಸಾವನ್ನು ನೀಡಿದ್ದು, ಅವರ ವಾಸ್ತವ್ಯವನ್ನು ಆಗಸ್ಟ್ 11 ರವರೆಗೆ ಇನ್ನೂ 14 ದಿನಗಳವರೆಗೆ ವಿಸ್ತರಿಸಿದೆ ಎಂದು ಮಾಧ್ಯಮ ವರದಿ ಬುಧವಾರ ತಿಳಿಸಿದೆ.
ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾ ದೇಶದಿಂದ ಜನರ ಆಕ್ರೋಶಕ್ಕೆ ಬೆದರಿದ ರಾಜಪಕ್ಸ ಜುಲೈ 9ರಂದು ಅಲ್ಲಿಂದ ಪಲಾಯನ ಮಾಡಿ ಮಾಲ್ಡೀವ್ಸ್ನಿಂದ ಖಾಸಗಿ ಭೇಟಿಗಾಗಿ ಸಿಂಗಾಪುರಕ್ಕೆ ಆಗಮಿಸಿದ್ದರು.
ರಾಜಪಕ್ಸ ಅವರಿಗೆ ಹೊಸ ವೀಸಾ ನೀಡಲಾಗಿದ್ದು, ಆಗಸ್ಟ್ 11ರವರೆಗೆ ಅವರಿಗೆ ಸಿಂಗಪುರದಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ ಎಂದು 'ದಿ ಸ್ಟ್ರೈಟ್ಸ್ ಟೈಮ್ಸ್' ವರದಿ ಮಾಡಿದೆ.
ಶ್ರೀಲಂಕಾವು 1948ರ ನಂತರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಆರ್ಥಿಕ ಬಿಕ್ಕಟ್ಟು ನಿರ್ವಹಿಸುವಲ್ಲಿ ವಿಫಲರಾಗಿದ್ದ ಅಧ್ಯಕ್ಷ ಗೊಟಬಯ ಮನೆಗೆ ಪ್ರತಿಭಟನಾಕಾರರು ನುಗ್ಗಿದ್ದರು. ಅದ್ಕೂ ಮುನ್ನವೇ ಅವರು ಕುಟುಂಬದ ಜೊತೆ ಮನೆ ತೊರೆದಿದ್ದರು.