ಇಸ್ಲಾಮಾಬಾದ್, ಜು 29 (DaijiworldNews/DB): ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಅಲ್ಪಸಂಖ್ಯಾತ ಹಿಂದೂ ಮಹಿಳೆಯೊಬ್ಬರು ಡಿಎಸ್ಪಿಯಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ. ಆ ಮೂಲಕ ಮೊದಲ ಬಾರಿಗೆ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಪಾಕಿಸ್ತಾನದ ಹಿಂದುಳಿದ ಮತ್ತು ಚಿಕ್ಕ ಜಿಲ್ಲೆಯಾದ ಜಕುಬಾಬಾದ್ ಮೂಲದ ಮನೀಷಾ ರೂಪೀಟ ಎಂಬವರೇ ಮೊದಲ ಬಾರಿಗೆ ಡಿಎಸ್ಪಿ ಗದ್ದುಗೆಗೇರಿದ ಅಲ್ಪಸಂಖ್ಯಾತ ಹಿಂದೂ ಮಹಿಳೆ. ಸಿಂಧ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅವರು ಈ ಹುದ್ದೆಗೇರಿದ್ದಾರೆ. ಸಾಕಷ್ಟು ಸವಾಲುಗಳೊಂದಿಗೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ತರಬೇತಿ ಪಡೆದುಕೊಂಡಿದ್ದ ಮನೀಷಾ ಉನ್ನತ ಹುದ್ದೆ ಹಿಡಿಯಲು ಶ್ರಮಿಸಿದ ಹಾದಿಯೂ ಸುಲಭದ್ದಾಗಿರಲಿಲ್ಲ. ಮನೀಷಾ ತಂದೆ ಮನಿಷಾ 13 ವರ್ಷದವಳಿದ್ದಾಗ ನಿಧನರಾದರು. ತಂದೆಯ ನಿಧನಾನಂತರ ಐದು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ತಾಯಿ ಕರಾಚಿಗೆ ಬಂದು ಮಕ್ಕಳನ್ನು ಬೆಳೆಸಿದರು. ಜಕುಬಾಬಾದ್ನಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ಅವಕಾಶವೂ ಇರಲಿಲ್ಲ. ವೈದ್ಯಕೀಯ ವ್ಯಾಸಂಗ ಹೊರತುಪಡಿಸಿದರೆ ಉನ್ನತ ವ್ಯಾಸಂಗಕ್ಕೆ ಅವಕಾಶವಿರಲಿಲ್ಲ. ನಾಲ್ವರು ಒಡಹುಟ್ಟಿದವರು ಎಂಬಿಬಿಎಸ್ ವೈದ್ಯರಾಗಿದ್ದು, ಕಠಿಣ ಜೀವನ ಪರಿಸ್ಥಿತಿಯನ್ನೇ ಎದುರಿಸಿಕೊಂಡು ಬಂದ ಮನೀಷಾ ಇಂದು ಡಿಎಸ್ಪಿ ಹುದ್ದೆಗೇರುವ ಮೂಲಕ ಸಾಧನೆಯ ಶಿಖರವೇರಿದ್ದಾರೆ.
ಎಂಬಿಬಿಎಸ್, ಡಾಕ್ಟರ್ ಆಫ್ ಫಿಸಿಕಲ್ ಥೆರಪಿ ಪದವಿ ಪಡೆದ ಮನೀಷಾಗೆ ಪೊಲೀಸ್ ಸಮವಸ್ತ್ರವೇ ನೆಚ್ಚಿನ ಉಡುಗೆಯಾಗಿತ್ತು. ಅದಕ್ಕಾಗಿ ಸಿಂಧ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಗೆ ರಹಸ್ಯ ತಯಾರಿ ನಡೆಸಿ ಪರೀಕ್ಷೆ ಬರೆದು16ನೇ ರ್ಯಾಂಕ್ ಗಳಿಸಿ ಈಗ ಡಿಎಸ್ಪಿಯಾಗಿದ್ದಾರೆ.
ಹೆಚ್ಚಾಗಿ ಮಹಿಳೆಯರು ಬಲಿಪಶುಗಳಾಗುತ್ತಾರೆ. ಅವರ ರಕ್ಷಣೆಗೆ ಮಹಿಳೆಯರು ಪೊಲೀಸ್ ಇಲಾಖೆಯಲ್ಲಿರಬೇಕು ಎಂದು ಸದಾ ಚಿಂತಿಸುತ್ತಿದ್ದೆ. ಇದೇ ನನಗೆ ಪೊಲೀಸ್ ಆಗುವ ನಿಟ್ಟಿನಲ್ಲಿ ಸ್ಪೂರ್ತಿ ತಂದುಕೊಟ್ಟಿತು ಎಂದು ಸುದ್ದಿಸಂಸ್ಥೆಯೊಂದಕ್ಕೆ ಮನೀಷಾ ತಿಳಿಸಿದ್ದಾರೆ.