ನ್ಯೂಯಾರ್ಕ್, ಜು 31 (DaijiworldNews/DB): ನ್ಯೂಯಾರ್ಕ್ ನಗರದಲ್ಲಿ ಮಂಕಿಪಾಕ್ಸ್ ಸಾಂಕ್ರಾಮಿಕ ರೋಗ ಮಿತಿ ಮೀರಿದೆ. ಇದೀಗ ಅಲ್ಲಿ ಈ ರೋಗದ ನಿಯಂತ್ರಣಕ್ಕಾಗಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ.
ನ್ಯೂಯಾರ್ಕ್ ರಾಜ್ಯದಲ್ಲಿ ಒಟ್ಟು 1,383 ಮಂಕಿಪಾಕ್ಸ್ ಪ್ರಕರಣಗಳು ಇಲ್ಲಿವರೆಗೆ ಪತ್ತೆಯಾಗಿವೆ. ಅದರಲ್ಲೂ ನ್ಯೂಯಾರ್ಕ್ ನಗರದಲ್ಲಿ ಅತಿ ಹೆಚ್ಚು ಪ್ರಕರಣ ಪತ್ತೆಯಾಗಿದೆ. ಸುಮಾರು 150,000 ಮಂದಿ ಸಾಂಕ್ರಾಮಿಕ ರೋಗದ ಭೀತಿಯಲ್ಲೇ ದಿನದೂಡುತ್ತಿದ್ದಾರೆ. ಹೀಗಾಗಿ ಸದ್ಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಅನಿವಾರ್ಯವಾಗಿದೆ ಎಂದು ಮೇಯರ್ ಎರಿಕ್ ಆಡಮ್ಸ್ ಮತ್ತು ನಗರ ಆರೋಗ್ಯ ಆಯುಕ್ತ ಅಶ್ವಿನ್ ವಾಸನ್ ಶನಿವಾರ ತಡರಾತ್ರಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ನಗರ ಆರೋಗ್ಯ ಸಂಹಿತೆಯ ಅಡಿಯಲ್ಲಿ ತುರ್ತು ಆದೇಶಗಳನ್ನು ಹೊರಡಿಸಲು ಮತ್ತು ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ನಿಯಂತ್ರಣದಲ್ಲಿಡಲು ಬೇಕಾದ ಪೂರಕ ಕ್ರಮಗಳನ್ನು ಕೈಗೊಳ್ಳಲು ಈ ಘೋಷಣೆ ಸಹಕಾರಿಯಾಗಲಿದೆ. ಕೆಲವು ನಿಬಂಧನೆಗಳ ತಿದ್ದುಪಡಿಗೂ ಇದು ಪೂರಕವಾಗಿರಲಿದೆ ಎನ್ನಲಾಗಿದೆ.
ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಅವರು ರಾಜ್ಯ ವಿಪತ್ತು ತುರ್ತು ಪರಿಸ್ಥಿತಿಯನ್ನು ಕಳೆದ ಒಂದು ದಿನದ ಹಿಂದಷ್ಟೇ ಘೋಷಿಸಿದ್ದರು. ಈ ಘೋಷಣೆ ಹೊರಬಿದ್ದ ಮರುದಿನವೇ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ.