ನ್ಯೂಯಾರ್ಕ್, ಆ 07 (DaijiworldNews/DB): ಗಂಡು ಮಗುವಾಗಲಿಲ್ಲವೆಂದು ಪತಿ ಮತ್ತು ಕುಟುಂಬ ಸದಸ್ಯರು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಭಾರತೀಯ ಮಹಿಳೆಯೊಬ್ಬರು ಅಮೆರಿಕಾದ ನ್ಯೂಯಾರ್ಕ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮಂದೀಪ್ ಕೌರ್ ಆತ್ಮಹತ್ಯೆಗೈದ ಮಹಿಳೆ. ಮೃತ ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಆದರೆ ಪತಿ, ಅತ್ತೆ ಮತ್ತು ಮನೆಯವರು ಗಂಡು ಮಗುವಿಗಾಗಿ ಆಕೆಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೆ ಅತ್ತೆ-ಮಾವ 50 ಲಕ್ಷ ರೂ. ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದರು. ಅಲ್ಲದೆ ಇದು ಅಸಾಧ್ಯವಾದಾಗ ಆಕೆಯ ಮೇಲೆ ಹಲ್ಲೆ ನಡೆಸಿ ಸಾಯುವಂತೆ ಹೇಳುತ್ತಿದ್ದರು ಎಂದು ಮಂದೀಪ್ ಕೌರ್ ಸಹೋದರಿ ಕುಲದೀಪ್ ಕೌರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಂದೀಪ್ ಫೆಬ್ರವರಿ 2015ರಲ್ಲಿ ವಿವಾಹವಾಗಿದ್ದು, ಬಳಿಕ ನ್ಯೂಯಾರ್ಕ್ಗೆ ತೆರಳಿದ್ದರು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಮಂದೀಪ್ ಆತ್ಮಹತ್ಯೆಗೂ ಮುನ್ನ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಪತಿ ಮತ್ತು ಅತ್ತೆ ನೀಡುತ್ತಿದ್ದ ಕಿರುಕುಳವೇ ಸಾವಿಗೆ ಕಾರಣ ಎಂದು ಹೇಳಿದ್ದಾರೆ. ಕಳೆದ ಎಂಟು ವರ್ಷಗಳಿಂದ ಅವರು ನನ್ನನ್ನು ಹೊಡೆಯುತ್ತಿದ್ದು, ಬದುಕಲು ಬಿಡುತ್ತಿಲ್ಲ ಎಂದು ನೋವು ವ್ಯಕ್ತಪಡಿಸಿದ್ದಾರೆ. ಪತಿ ಬದಲಾಗಬಹುದೆಂದು ಕಾದೆ. ಆದರೆ ಪ್ರತಿದಿನ ಚಿತ್ರಹಿಂಸೆ ನೀಡಲಾಗುತ್ತಿತ್ತು. ಅಲ್ಲದೆ ಆತ ಇನ್ನೊಂದು ಸಂಬಂಧ ಹೊಂದಿದ್ದ ಎಂದು ವೀಡಿಯೋದಲ್ಲಿ ಆಕೆ ಹೇಳಿದ್ದಾಳೆ ಎನ್ನಲಾಗಿದೆ.
ಮನದೀಪ್ ಕೌರ್ ಅವರ ತಂದೆ ಜಸ್ಪಾಲ್ ಸಿಂಗ್ ಅವರು ಮಂದೀಪ್ ಕೌರ್ ಅವರ ಪತಿ ರಂಜೋತ್ವೀರ್ ಸಿಂಗ್ ಸಂಧು, ರಂಜೋತ್ವೀರ್ ಅವರ ತಂದೆ ಮುಖ್ತಾರ್ ಸಿಂಗ್, ತಾಯಿ ಕುಲದೀಪ್ ರಾಜ್ ಕೌರ್ ಮತ್ತು ಸಹೋದರ ಜಸ್ವೀರ್ ಸಿಂಗ್ ಅವರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಎಫ್ಐಆರ್ ದಾಖಲಿಸಿದ್ದಾರೆ. ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಜಿಬಾಬಾದ್ ಪೊಲೀಸ್ ಠಾಣೆಯ ಪೊಲೀಸರು ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ), 498-ಎ (ಕೌಟುಂಬಿಕ ಹಿಂಸೆ), 323, 342 (ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಭಾರತಕ್ಕೆ ತರುವ ಪ್ರಯತ್ನ ನಡೆದಿದ್ದು, ನ್ಯೂಯಾರ್ಕ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆಂದು ವರದಿಯಾಗಿದೆ.