ಬೀಜಿಂಗ್, ಆ 08 (DaijiworldNews/DB): ತೈವಾನ್ ಸುತ್ತ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಬೃಹತ್ ಪ್ರಮಾಣದ ಸಮುದ್ರ ಮತ್ತು ವಾಯು ಸಮರಾಭ್ಯಾಸವನ್ನು ಚೀನಾ ಮುಂದುವರಿಸಿದೆ. ಸಮರಾಭ್ಯಾಸ ಭಾನುವಾರವೇ ಕೊನೆಗೊಳ್ಳಲಿದೆ ಎಂಬ ಪ್ರಕಟಣೆಯ ಹೊರತಾಗಿಯೂ ಚೀನಾ ಸಮರಾಭ್ಯಾಸ ವಿಸ್ತರಿಸಿದೆ.
ಚೀನಾವು ಸಮರಾಭ್ಯಾಸವನ್ನು ಮುಂದುವರಿಸುತ್ತಿರುವುದು ಜಲಾಂತರ್ಗಾಮಿ ವಿರೋಧಿ ಮತ್ತು ಸಮುದ್ರ ದಾಳಿ ಕಾರ್ಯಾಚರಣೆಗಳ ಹಿನ್ನೆಲೆಯಲ್ಲೇ ಇವೆ. ಸಮರಾಭ್ಯಾಸ ನಿಲ್ಲಿಸಲು ಇನ್ನೂ ಚೀನಾ ದಿನಾಂಕ ಪ್ರಕಟಿಸಿಲ್ಲ ಎಂದು ವರದಿಗಳು ತಿಳಿಸಿದೆ.
ಅಮೆರಿಕದ ಹೌಸ್ ನ್ಯಾನ್ಸಿ ಪೆಲೋಸಿ ಅವರು ಇತ್ತೀಚೆಗಷ್ಟೇ ತೈವಾನ್ಗೆ ಭೇಟಿ ನೀಡಿದ್ದರು. ಬೀಜಿಂಗ್ನಿಂದ ಇದಕ್ಕೆ ತೀವ್ರ ವಿರೋಧವಿದ್ದರೂ ವಿರೋಧ ಲೆಕ್ಕಿಸದೆ ಅವರು ಉದ್ದೇಶವ=ಪೂರ್ವಕವಾಗಿಯೇ ತೈವಾನ್ಗೆ ಭೇಟಿ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಚೀನಾ ಸಮರಾಭ್ಯಾಸವನ್ನು ವಿಸ್ತರಿಸಿದೆ ಎಂದು ಹೇಳಲಾಗುತ್ತಿದೆ.
ಚೀನಾದ ಮಿಲಿಟರಿಯು ತೈವಾನ್ಗೆ ನೌಕಾ ಮತ್ತು ವಾಯು ದಿಗ್ಬಂಧನ ಹಾಕುತ್ತಿದೆ. ಅಲ್ಲದೆ ತೈವಾನ್ ಮೇಲೆ ಬೀಚ್ ದಾಳಿ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ. ಭಾನುವಾರ ಒಂದೇ ದಿನ ಚೀನಾದ 66 ವಿಮಾನಗಳು ಹಾರಾಟ ಮಾಡಿದ್ದು, ಈ ಪೈಕಿ 22 ವಿಮಾನಗಳು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿದೆ ಎಂದು ತೈವಾನ್ ಮಿಲಿಟರಿ ತಿಳಿಸಿದೆ.
ಅಲ್ಲದೆ ಚೀನಾ ಕರಾವಳಿಯಿಂದ ಕೆಲವೇ ಕಿಮೀ ದೂರದಲ್ಲಿ ತೈವಾನಿನ ಹೊರ ವಲಯದ ಕಿನ್ಮೆನ್ ದ್ವೀಪವಿದೆ. ಇಲ್ಲಿ ಭಾನುವಾರ ಸಂಜೆ ಚೀನಾದ ಡ್ರೋನ್ ಇನ್ನೊಮ್ಮೆ ಕಾಣಿಸಿಕೊಂಡಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ವರದಿ ಬಿಡುಗಡೆಗೊಳಿಸಿದೆ.