ಬೀಜಿಂಗ್, ಆ 10 (DaijiworldNews/DB): ಪ್ರಾಣಿಗಳ ಮುಖಾಂತರ ಹರಡುವ ಹೊಸ ಮಾದರಿಯ ಹೆನಿಪಾವೈರಸ್ ಸೋಂಕು ಚೀನಾದಲ್ಲಿ ಪತ್ತೆಯಾಗಿರುವುದು ಆತಂಕ ಸೃಷ್ಟಿಸಿದೆ. ಚೀನಾದ ಶಾಂಡಾಂಗ್ ಮತ್ತು ಹೆನನ್ ಪ್ರಾಂತ್ಯದಲ್ಲಿ 35 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.
ಹೆನಿಪಾವೈರಸ್ ಅಥವಾ ಎಲ್ಎವೈವಿ (ಲಾಂಗ್ಯಾ ಹೆನಿಪಾವೈರಸ್) ಎಂದು ಕರೆಯಲ್ಪಡುವ ಈ ಹೊಸ ವಿಧದ ವೈರಸ್ ಪ್ರಾಣಿಗಳಲ್ಲಿ ಜನಿಸಿ ಬಳಿಕ ಮನುಷ್ಯನಿಗೆ ಹರಡುತ್ತಿದೆ. ಜ್ವರ, ನಿಶ್ಯಕ್ತಿ, ಕೆಮ್ಮು, ಉಬ್ಬಳಿಕೆ, ಸ್ನಾಯು ಸೆಳೆತ, ಹಸಿವಿಲ್ಲದಿರುವುದು ಮುಂತಾದ ಲಕ್ಷಣಗಳು ಕಂಡು ಬರುತ್ತವೆ. ಜ್ವರದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸಿದ ವೇಳೆ ಸೋಂಕು ಪತ್ತೆಯಾಗಿದೆ ಎಂದು ವೈದ್ರು ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆಯಾಗಲೀ, ಲಸಿಕೆಯಾಗಲೀ ಇಲ್ಲ. ಸೋಂಕಿನ ಕಾರಣದಿಂದ ಯಾವುದೇ ಮರಣ ಸಂಭವಿಸಿಲ್ಲ. ಹೀಗಾಗಿ ಜನರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಡ್ಯೂಕ್-ಎನ್ಯುಎಸ್ ಮೆಡಿಕಲ್ ಸ್ಕೂಲ್ನ ಪ್ರಾಧ್ಯಾಪಕ ವಾಂಗ್ ಲಿನ್ಫಾ ಹೇಳಿದ್ದಾರೆ.