ವಾಷಿಂಗ್ಟನ್, ಆ 11 (DaijiworldNews/DB): ಕೋಟ್ಯಾಧಿಪತಿ ಮಾಧ್ಯಮ ದಿಗ್ಗಜ 91 ವರ್ಷದ ರೂಪರ್ಟ್ ಮುರ್ಡೋಕ್ ಮತ್ತು ರೂಪದರ್ಶಿ ಜೆರಿ ಹಾಲ್ ಅವರ ವೈವಾಹಿಕ ಸಂಬಂಧ ವಿಚ್ಚೇದನದೊಂದಿಗೆ ಅಂತ್ಯಗೊಂಡಿದೆ. ತಾವಿಬ್ಬರು ದೂರವಾಗುವುದಾಗಿ ಘೋಷಿಸಿಕೊಂಡ ಐದೇ ವಾರಗಳಲ್ಲಿ ಇಬ್ಬರು ಡೈವೋರ್ಸ್ ಪಡೆದುಕೊಂಡಿದ್ದಾರೆ.
91 ವರ್ಷದ ರೂಪರ್ಟ್ ಮುರ್ಡೋಕ್ ಹಾಗೂ 65 ವರ್ಷದ ಮಾಜಿ ಸೂಪರ್ ಮಾಡೆಲ್ ಜೆರಿ ಹಾಲ್ ಅವರ ವಿವಾಹ ಆರು ವರ್ಷದ ಹಿಂದೆಯಷ್ಟೇ ನಡೆದಿತ್ತು. 2014ರಲ್ಲಿ ವೆಂಡಿ ಡೆಂಗ್ ಅವರಿಂದ ವಿಚ್ಛೇದನ ಪಡೆದ ಬಳಿಕ ಮುರ್ಡೋಕ್ ಅವರು ಹಾಲ್ ಅವರನ್ನು ಮದುವೆಯಾಗಿದ್ದರು. ಹಾಲ್ಗೆ ಇದು ಮೊದಲ ಮದುವೆಯಾಗಿದ್ದರೆ, ಮುರ್ಡೋಕ್ಗೆ ನಾಲ್ಕನೇ ವಿವಾಹವಾಗಿತ್ತು. ಆರು ವರ್ಷ ದಾಂಪತ್ಯ ನಡೆಸಿದ್ದ ಈ ದಂಪತಿ ಇದೀಗ ವಿಚ್ಚೇದನ ಪಡೆದುಕೊಂಡು ಬೇರೆ ಬೇರೆಯಾಗುತ್ತಿದ್ದಾರೆ. ಆದರೆ ಇಬ್ಬರೂ ಉತ್ತಮ ಸ್ನೇಹಿತರಾಗಿ ಉಳಿಯುತ್ತೇವೆ ಎಂದು ಘೋಷಿಸಿಕೊಂಡಿದ್ದಾರೆ.
ವಿಚ್ಚೇದನ ಅರ್ಜಿಯನ್ನು ರದ್ದುಗೊಳಿಸುವಂತೆ ಕೋರಿ ಜೆರಿ ಹಾಲ್ ಅವರು ತಮ್ಮ ವಕೀಲ ರೊನಾಲ್ಡ್ ಬ್ರಾಟ್ ಮೂಲಕ ಲಾಸ್ ಏಂಜಲೀಸ್ ಸುಪೀರಿಯರ್ ಕೋರ್ಟ್ಗೆ ಬುಧವಾರ ಮನವಿ ಮಾಡಿದ್ದರು. ಹೀಗಾಗಿ ಈ ಪ್ರಕರಣ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಕೋರ್ಟ್ಗೆ ಮನವಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಅವರ ವಿಚ್ಚೇದನ ಒಪ್ಪಂದ ಪೂರ್ಣಗೊಂಡಿದೆ.