ಕಾಬೂಲ್, ಆ 12 (DaijiworldNews/DB): ಅಪ್ಘಾನಿಸ್ತಾನದ ಕಾಬೂಲ್ನಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ತಾಲಿಬಾನ್ ಪ್ರಖ್ಯಾತ ಧರ್ಮಗುರು ಶೇಖ್ ರಹೀಮುಲ್ಲಾ ಹಕ್ಕಾನಿ ಹತ್ಯೆಯಾಗಿದ್ದಾರೆ.
ಕಾಲು ಕಳೆದುಕೊಂಡು ಪ್ಲಾಸ್ಟಿಕ್ ಕೃತಕ ಕಾಲು ಅಳವಡಿಸಿಕೊಂಡಿದ್ದ ವ್ಯಕ್ತಿ ಕೃತಕ ಕಾಲಿನಲ್ಲಿ ಸ್ಪೋಟಕಗಳನ್ನು ಇಟ್ಟುಕೊಂಡು ಬಂದು ಸ್ಪೋಟ ನಡೆಸಿದ್ದಾನೆ. ಸೆಮಿನಾರ್ವೊಂದರಲ್ಲಿ ಈ ಸ್ಪೋಟ ನಡೆಸಿದ್ದಾನೆ ಎಂದು ತಾಲಿಬಾನ್ ಹೇಳಿದೆ. ಶೇಖ್ ರಹೀಮುಲ್ಲಾ ಹಕ್ಕಾನಿ ಹತ್ಯೆಯಾಗಿರುವುದನ್ನು ಇಸ್ಲಾಮಿಕ್ ಎಮಿರೇಟ್ನ ವಕ್ತಾರ ಬಿಲಾಲ್ ಕರಿಮಿ ಖಚಿತಪಡಿಸಿರುವುದಾಗಿ ಕಾಬೂಲ್ನ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ ಎಂದು ತಿಳಿದು ಬಂದಿದೆ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ನಡೆದಿರುವ ಈ ಸ್ಪೋಟದ ಹಿಂದೆ ಯಾರ ಕೈವಾಡವಿದೆ ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಾಲಿಬಾನ್ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಕಳೆದ ಕೆಲವು ತಿಂಗಳುಗಳಿಂದೀಚೆಗೆ ಅಫ್ಘಾನಿಸ್ತಾನದಲ್ಲಿ ಸರಣಿ ಬಾಂಬ್ ಸ್ಪೋಟಗಳು ಸಂಭವಿಸುತ್ತಿವೆ. ಕಾಬೂಲ್ನಲ್ಲೇ ಅತಿ ಹೆಚ್ಚು ಸ್ಪೋಟಗಳು ನಡೆಯುತ್ತಿದೆ.