ಲಂಡನ್, ಆ 14 (DaijiworldNews/DB): ಸಲ್ಮಾನ್ ರಶ್ದಿ ಅವರ ಮೇಲಿನ ಹಲ್ಲೆಯನ್ನು ಖಂಡಿಸಿದ್ದ ಹ್ಯಾರಿ ಪಾಟರ್ ಖ್ಯಾತಿಯ ಲೇಖಕಿ ಜೆ.ಕೆ. ರೌಲಿಂಗ್ ಅವರಿಗೆ ವ್ಯಕ್ತಿಯೊಬ್ಬ ಸಾಮಾಜಿಕ ತಾಣದಲ್ಲಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.
ರಶ್ದಿ ಮೇಲಿನ ಹಲ್ಲೆ ಭಯಾನಕ ಘಟನೆ, ಶೀಘ್ರ ಅವರು ಗುಣಮುಖರಾಗಲಿ ಎಂದು ಟ್ವಿಟರ್ನಲ್ಲಿ ನಿನ್ನೆ ರೌಲಿಂಗ್ ಬರೆದುಕೊಂಡಿದ್ದರು. ಈ ಪೋಸ್ಟ್ಗೆ ಕಾಮೆಂಟ್ ಮಾಡಿದ ಮೀರ್ ಆಸೀಫ್ ಅಜೀಜ್ ಎಂಬಾತ ’ಹೆಚ್ಚು ತಲೆಕೆಡಿಸಿಕೊಳ್ಳಬೇಡ, ಮುಂದಿನ ಸರದಿ ನಿನ್ನದು, ರಶ್ದಿ ಮೇಲಿನ ಹಲ್ಲೆಯಂತೆ ನಿನಗೂ ಮಾಡಲಾಗುವುದು’ ಎಂಬರ್ಥದಲ್ಲಿ ಬೆದರಿಕೆ ಹಾಕಿ ಬರೆದುಕೊಂಡಿದ್ದ. ಈ ಕಾಮೆಂಟ್ನ್ನು ಗಂಭೀರವಾಗಿ ಪರಿಗಣಿಸಿದ ರೌಲಿಂಗ್ ಕಾಮೆಂಟ್ನ ಸ್ಕ್ರೀನ್ಶಾಟ್ನ್ನು ಟ್ವಿಟರ್ ಸಪೋರ್ಟ್ ಟೀಂನವರಿಗೆ ಕಳುಹಿಸಿ ಸಹಾಯ ಯಾಚಿಸಿದ್ದಾರೆ. ರೌಲಿಂಗ್ ಮನವಿಗೆ ಟ್ವಿಟರ್ ಸ್ಪಂದಿಸಿದ್ದು, ಬೆದರಿಕೆ ಹಾಕಿರುವಾತನ ಅಕೌಂಟ್ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದೆ.
ಆಸಿಫ್ ಅಜೀಜ್ ಈ ಕಾಮೆಂಟ್ಗೂ ಮುನ್ನ ರಶ್ದಿ ಮೇಲೆ ದಾಳಿ ನಡೆಸಿದ ಹಾದಿ ಮಟರ್ ಕ್ರಾಂತಿಕಾರಿ ವ್ಯಕ್ತಿ ಎಂಬುದಾಗಿ ದಾಳಿ ಮತ್ತು ಹಲ್ಲೆಯನ್ನು ಬೆಂಬಲಿಸಿ ಬರೆದುಕೊಂಡಿದ್ದ.
ಪಶ್ಚಿಮ ನ್ಯೂಯಾರ್ಕ್ನ ಷಟೌಕ್ವಾ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಹಲವು ಬಾರಿ ಇರಿಯಲಾಗಿತ್ತು.