ವಾಷಿಂಗ್ಟನ್, ಫೆ 01 (MSP): ಅಮೆರಿಕದಲ್ಲಿ ಜನಾಂಗೀಯ ದ್ವೇಷ ಮತ್ತೆ ಗರಿಗೆದರಿದ್ದು , ಲೂಯಿವಿಲ್ಲೆ ನಗರದ ಸ್ವಾಮಿ ನಾರಾಯಣ ದೇವಾಲಯವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿ ಅಟ್ಟಹಾಸ ಮೆರೆದಿದ್ದಾರೆ. ಈ ಘಟನೆ ಮಂಗಳವಾರ ಬೆಳಗ್ಗಿನ ಸಮಯದಲ್ಲಿ ನಡೆದಿದ್ದು, ಕೆಂಟುಕಿ ರಾಜ್ಯದಲ್ಲಿರುವ ಸ್ವಾಮಿನಾರಾಯಣ ದೇವಾಲಯದ ಮೂರ್ತಿಗೆ ಕಪ್ಪು ಬಣ್ಣ ಹಚ್ಚಿ, ಹಾಲ್ ನಲ್ಲಿರುವ ಕುರ್ಚಿಗಳನ್ನು ಚೂರಿಯಿಂದ ಹರಿದು ಹಾಕಿರುವುದಾಗಿ ವರದಿಯಾಗಿದೆ.
ಗೋಡೆಯ ಮೇಲೆ ಅಸಭ್ಯವಾದ ಸಂದೇಶಗಳನ್ನು ಬರೆಯಲಾಗಿದ್ದು, ದೇಗುಲದ ಕಿಟಕಿ ಗಾಜುಗಳನ್ನು ಸಹ ಒಡೆದು ಹಾಕಲಾಗಿದೆ. ದೇವಾಲಯದಲ್ಲಿದ್ದ ಕುರ್ಚಿಗೆ ಚಾಕುವಿನಿಂದ ಇರಿದು ದ್ವೇಷ ವ್ಯಕ್ತಪಡಿಸಲಾಗಿದೆ.ಆದರೆ, ಈ ದುಷ್ಕೃತ್ಯದ ವಿಡಿಯೊ ಲಭ್ಯವಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಭಾರತ–ಅಮೆರಿಕದ ಹಿಂದೂ ಸಮುದಾಯದಲ್ಲಿ ಈ ಘಟನೆ ಆತಂಕ ಮೂಡಿಸಿದೆ. ಇದೊಂದು ‘ದ್ವೇಷದ ಅಪರಾಧ’ ಎಂದು ಪರಿಗಣಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ, ಯಾವುದೇ ವ್ಯಕ್ತಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿಲ್ಲ.
ಪ್ರಕರಣದ ಬಗ್ಗೆ ಅಮೆರಿಕದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ದೇವಾಲಯಕ್ಕೆ ಇನ್ನು ಮುಂದೆ ಹೆಚ್ಚಿನ ಭದ್ರತೆ ಒದಗಿಸಲಾಗುವುದು ಎಂದು ಅಲ್ಲಿನ ನಗರದ ಪೊಲೀಸ್ ಮುಖ್ಯಸ್ಥ ಸ್ಟೆವ್ ಕೊನ್ರಾಡ್ ತಿಳಿಸಿದ್ದಾರೆ.
ಇನ್ನು ಅಮೆರಿಕಾದಲ್ಲಿ ಈ ಹಿಂದೆಯೂ ಇದೇ ರೀತಿಯ ಘಟನೆಗಳು ನಡೆದಿದ್ದು 2015ರ ಫೆಬ್ರುವರಿಯಲ್ಲಿ ಕೆಂಟ್ ಮತ್ತು ಸಿಯಾಟಲ್ನಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಲಾಗಿತ್ತು. ಬಳಿಕ, ಏಪ್ರಿಲ್ನಲ್ಲಿ ಉತ್ತರ ಟೆಕ್ಸಾಸ್ನ ಹಿಂದೂ ದೇವಾಲಯದ ಮೇಲೆ ದಾಳಿ ನಡೆದಿತ್ತು.