ಜಿನೀವಾ, ಆ 18 (DaijiworldNews/DB): ಮಂಕಿಪಾಕ್ಸ್ ಸೋಂಕಿನ ಬಗ್ಗೆ ಜನರು ಹೆಚ್ಚು ಜಾಗರೂಕರಾಗಿರಬೇಕು. ಇದರ ಲಸಿಕೆ ಶೇ. 100 ರಷ್ಟು ಪರಿಣಾಮಕಾರಿಯಾಗಿಲ್ಲವಾದ್ದರಿಂದ ಎಚ್ಚರಿಕೆಯೇ ಮದ್ದು ಎಂದು ಡಬ್ಲ್ಯುಎಚ್ಒ ತಾಂತ್ರಿಕ ನಾಯಕ ರೋಸಮಂಡ್ ಲೂಯಿಸ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಕಿಪಾಕ್ಸ್ ಬಗ್ಗೆ ಜನ ಹೆಚ್ಚು ಎಚ್ಚರಿಕೆ ವಹಿಸಬೇಕು. ಮಾರ್ಗಸೂಚಿಗಳನ್ನು ಸರಿಯಾಗಿ ಪಾಲನೆ ಮಾಡುವುದರೊಂದಿಗೆ ಈ ರೋಗ ಹರಡದಂತೆ ಜಾಗರೂಕರಾಗಿರಬೇಕು. ಮಂಕಿಪಾಕ್ಸ್ಗೆ ಸದ್ಯ ಲಸಿಕೆ ಇದೆಯಾದರೂ, ಇದು ಶೇ. 100 ರಷ್ಟು ಪರಿಣಾಮಕಾರಿಯಲ್ಲ ಎಂದರು.
ಡಬ್ಲ್ಯುಎಚ್ಒ ಮಹಾ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಾತನಾಡಿ, ಪ್ರತಿವಾರ ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಸುಮಾರು 7,500 ಪ್ರಕರಣಗಳು ಕಳೆದ ವಾರ ವರದಿಯಾಗಿದ್ದು, ಇದು ಹಿಂದಿನ ವಾರಕ್ಕಿಂತ ಶೇ. 20ರಷ್ಟು ಜಾಸ್ತಿಯಾಗಿದೆ. ಅಮೆರಿಕಾ, ಯುರೋಪ್ಗಳಲ್ಲಿ ಪ್ರಕರಣ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆರಂಭಿಕ ಹಂತದಲ್ಲಿ ಜ್ವರ, ಶೀತ, ಬಳಿಕ ದದ್ದುಗಳು ಕಾಣಿಸಿಕೊಳ್ಳುತ್ತದೆ. ಸೋಂಕಿತ ವ್ಯಕ್ತಿಗಳೊಂದಿಗೆ ಲೈಂಗಿಕ ಸಂಪರ್ಕ, ನಿಕಟ ದೈಹಿಕ ಸಂಪರ್ಕದ ಮೂಲಕವೇ ಈ ಸೋಂಕು ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಪುರುಷರು ಪುರುಷರೊಂದಿಗೇ ಲೈಂಗಿಕ ಸಂಬಂಧ ಹೊಂದಿದವರಲ್ಲಿ ಹೆಚ್ಚು ಸೋಂಕು ಪತ್ತೆಯಾಗುತ್ತಿದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶ್ವಾದ್ಯಂತ 92ಕ್ಕೂ ಹೆಚ್ಚು ದೇಶಗಳಲ್ಲಿ 35,000ಕ್ಕೂ ಅಧಿಕ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಯಾವುದೇ ಚಿಕಿತ್ಸೆ ಇಲ್ಲದೆ ಗುಣಮುಖರಾಗಿದ್ದಾರೆ ಎಂದವರು ಮಾಹಿತಿ ನೀಡಿದರು.