ಸೊಮಾಲಿಯಾ, ಆ 20 (DaijiworldNews/DB): ಸೊಮಾಲಿಯಾದ ಹಯಾತ್ ಹೊಟೇಲ್ ಮೇಲೆ ಶುಕ್ರವಾರ ಉಗ್ರರು ದಾಳಿ ನಡೆದಿದ್ದು, ಸುಮಾರು 10ಕ್ಕೂ ಹೆಚ್ಚು ಮಂದಿ ನಾಗರಿಕರು ಹತ್ಯೆಯಾಗಿದ್ದಾರೆ ಎನ್ನಲಾಗಿದೆ.
ಮುಂಬೈನ ತಾಜ್ ಹೋಟೆಲ್ನ ಬಾಂಬ್ ದಾಳಿಯನ್ನು ನೆನಪಿಸುವಂತಹ ಮತ್ತೊಂದು ದಾಳಿ ಸೊಮಾಲಿಯಾ ರಾಜಧಾನಿ ಮೊಗಾದಿಶುನ ಹಯಾತ್ ಹೊಟೇಲ್ ಮೇಲೆ ನಡೆದಿದೆ. ಉಗ್ರರು ಮನ ಬಂದಂತೆ ಗುಂಡು ಹಾರಿಸಿ, ಎರಡು ಕಾರು ಬಾಂಬ್ ಸ್ಪೋಟ್ ನಡೆಸಿದ್ದಾರೆ. ಘಟನೆಯಲ್ಲಿ ಸಾಕಷ್ಟು ಸಾವು-ನೋವು ಸಂಭವಿಸಿದ್ದು, 10ಕ್ಕೂ ಹೆಚ್ಚು ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಅಲ್ಖೈದಾದೊಂದಿಗೆ ಬೆರೆತಿರುವ ಅಲ್-ಶಬಾಬ್ ಸಂಘಟನೆಯ ಉಗ್ರರು ಈ ಬದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಈ ವೇಳೆ ಗುಂಡಿನ ಚಕಮಕಿ ನಡೆದಿದೆ. ಹೋಟೆಲ್ ಬಳಿಯ ತಡೆಗೋಡೆಗೆ ಒಂದು ಕಾರು ಹಾಗೂ ಹೋಟೆಲ್ನ ಗೇಟ್ಗೆ ಇನ್ನೊಂದು ಕಾರು ಢಿಕ್ಕಿ ಹೊಡೆಸಿ ಸ್ಫೋಟಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿರುವುದಾಗಿ ವರದಿಯಾಗಿದೆ. ಕಟ್ಟಡದೊಳಗೆ ಉಗ್ರರು ಅವಿತು ಕುಳಿತಿರುವ ಶಂಕೆ ವ್ಯಕ್ತವಾಗಿದೆ ಎಂದು ಭದ್ರತಾ ಅಧಿಕಾರಿ ಅಬ್ದುಕದಿರ್ ಹಸನ್ ತಿಳಿಸಿದ್ದಾರೆ.
ಸದ್ಯ ಸ್ಪೋಟದ ಸದ್ದು ನಿಂತಿದೆ. ಆದರೆ ಗುಂಡಿನ ಸದ್ದು ಆಗಾಗ ಕೇಳಿ ಬರುತ್ತಿದೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.