ಪಾಕಿಸ್ತಾನ, ಆ 21 (DaijiworldNews/DB): ಯುದ್ದದಿಂದ ಕಾಶ್ಮೀರ ಸಮಸ್ಯೆ ಪರಿಹಾರವಾಗದರು. ಮಾತುಕತೆ ಮೂಲಕ ಪರಿಹರಿಸಿಕೊಂಡು ಭಾರತದೊಂದಿಗೆ ಪಾಕಿಸ್ತಾನ ಶಾಶ್ವತ ಶಾಂತಿಯನ್ನು ಬಯಸುವುದಾಗಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪ್ರತಿನಿಧಿಗಳ ಗುಂಪಿನೊಂದಿಗೆ ಶನಿವಾರ ಮಾತನಾಡಿದ ಅವರು, ಸೌಹಾರ್ದಯುತ ಮಾತುಕತೆಗಳು ನಡೆದರೆ ಯಾವುದೇ ಸಮಸ್ಯೆಗಳು ಪರಿಹಾರವಾಗುತ್ತವೆ. ಕಾಶ್ಮೀರ ಕುರಿತಾದ ಸಮಸ್ಯೆಯೂ ಇದೇ ರೀತಿಯದ್ದಾಗಿದ್ದು, ಭಾರತದೊಂದಿಗೆ ಈ ಕುರಿತು ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು. ಯುದ್ದದಿಂದ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದರು.
ಸ್ವಾತಂತ್ರ್ಯ ಬಂದ ಬಳಿಕ ಉಭಯ ದೇಶಗಳ ನಡುವೆ ಕಾಶ್ಮೀರ ಸಮಸ್ಯೆ ಕಗ್ಗಂಟಾಗಿಯೇ ಉಳಿದಿದೆ. ಇತ್ತೀಚೆಗೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ ಕಾಶ್ಮೀರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಆದಾಗ್ಯೂ ಅಲ್ಲಿನ ಪರಿಸ್ಥಿತಿಯಲ್ಲಿ ಬದಲಾವಣೆಗಳೇನೂ ನಡೆದಿಲ್ಲ. ಆಗಾಗ ಒಳನುಸುಳುವಿಕೆ, ದಾಳಿಗಳು ಪಾಕಿಸ್ತಾನದ ಕಡೆಯಿಂದ ಇಲ್ಲಿ ನಡೆಯುತ್ತಲೇ ಇವೆ.
ಈ ನಡುವೆ ಪಾಕಿಸ್ತಾನವು ಭಯೋತ್ಪಾದನೆಗೆ ಅಂತ್ಯ ಹಾಡಿದರೆ ಮಾತುಕತೆಗೆ ಸಿದ್ದ ಎಂದು ಭಾರತ ಆಗ್ರಹಿಸುತ್ತಲೇ ಬಂದಿದ್ದರೂ, ಇದಕ್ಕೆ ಪಾಕಿಸ್ತಾನ ಒಪ್ಪಿಗೆ ನೀಡುತ್ತಿಲ್ಲ.