ವಿಶ್ವಸಂಸ್ಥೆ, ಅ 26(DaijiworldNews/MS): ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಇದೇ ಮೊದಲ ಬಾರಿಗೆ ರಷ್ಯಾ ವಿರುದ್ಧ ಭಾರತ ಮತ ಚಲಾಯಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಉಕ್ರೇನ್ ಮೇಲಿನ ಕಾರ್ಯವಿಧಾನದ ಮತದಾನದ ಸಂದರ್ಭದಲ್ಲಿ ಭಾರತವು ಬುಧವಾರ ಮೊದಲ ಬಾರಿಗೆ ರಷ್ಯಾ ವಿರುದ್ಧ ಮತ ಚಲಾಯಿಸಿದೆ
ಫೆಬ್ರವರಿಯಲ್ಲಿ ರಷ್ಯಾದ ಸೇನಾ ಕಾರ್ಯಾಚರಣೆ ಶುರು ಮಾಡಿದ ನಂತರ ಉಕ್ರೇನ್ ವಿಷಯದಲ್ಲಿ ರಷ್ಯಾ ವಿರುದ್ಧ ಭಾರತ ಮತ ಚಲಾಯಿಸಿದ್ದು ಇದೇ ಮೊದಲು. ಇಲ್ಲಿಯವರೆಗೆ, ಉಕ್ರೇನ್ ಕುರಿತಾದ ಭದ್ರತಾ ಮಂಡಳಿ ಸಭೆಗಳಿಗೆ ಭಾರತ ಗೈರಾಗುತ್ತಿತ್ತು. ಭಾರತದ ಈ ಕ್ರಮದಿಂದ ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ತುಂಬಾ ಕಿರಿಕಿರಿಯನ್ನುಂಟು ಮಾಡುತ್ತಿತ್ತು.
ಯುದ್ಧದ ಆರಂಭದ ನಂತರ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ಪ್ರಮುಖ ಆರ್ಥಿಕ ಮತ್ತು ಇತರ ನಿರ್ಬಂಧಗಳನ್ನು ವಿಧಿಸಿವೆ. ಆದಾಗ್ಯೂ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ರಷ್ಯಾವನ್ನು ಭಾರತ ಟೀಕಿಸಿಲ್ಲ. ರಾಜತಾಂತ್ರಿಕತೆ ಮತ್ತು ಸಂವಾದದ ಹಾದಿಗೆ ಮರಳಲು ರಷ್ಯಾ ಮತ್ತು ಉಕ್ರೇನ್ಗಳಿಗೆ ದೆಹಲಿ ಪದೇ ಪದೇ ಕರೆ ನೀಡಿದೆ ಮತ್ತು ಉಭಯ ದೇಶಗಳ ನಡುವಿನ ಸಂಘರ್ಷವನ್ನು ಕೊನೆಗೊಳಿಸುವ ಎಲ್ಲಾ ರಾಜತಾಂತ್ರಿಕ ಪ್ರಯತ್ನಗಳಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ. ಭಾರತವು ಪ್ರಸ್ತುತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎರಡು ವರ್ಷಗಳ ಅವಧಿಗೆ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿದೆ.
ಇನ್ನು ಈ ಸಭೆಯಲ್ಲಿ ಮಾತನಾಡಿದ ಭಾರತದ ಪ್ರತಿನಿಧಿ ರುಚಿರಾ ಕಾಂಬೋಜ್, ರಷ್ಯಾ ಮತ್ತು ಉಕ್ರೇನ್ ಮಾತುಕತೆ ಮೂಲಕ ಬಿಕ್ಕಟ್ಟು ಪರಿಹರಿಸಬೇಕು. ಆಯಾ ರಾಷ್ಟ್ರ ಗಳ ಸಾರ್ವಭೌಮತ್ವವನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.