ಮನಿಲಾ, ಆ 27 (DaijiworldNews/DB): ಫಿಲಿಪೈನ್ಸ್ ಕರಾವಳಿ ಕಾವಲು ಸಿಬಂದಿ ಮತ್ತು ಸ್ವಯಂಸೇವಕರು ಸೇರಿ 82 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಅಂತರ್ದ್ವೀಪ ದೋಣಿಯಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಮನಿಲಾ ದಕ್ಷಿಣ ಬಂದರಿನ ಬಳಿ ನಡೆದಿದೆ. ದೋಣಿಯೊಳಗಿದ್ದ 80 ಸಿಬಂದಿಯನ್ನು ರಕ್ಷಿಸಲಾಗಿದೆ.
ದೋಣಿಯು ಮನಿಲಾದ ದಕ್ಷಿಣ ಬಂದರನ್ನು ಸಮೀಪಿಸುತ್ತಿರುವಾಗ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಸಿಬಂದಿಯಲ್ಲಿ ಕೆಲವರು ನೀರಿಗೆ ಧುಮುಕಿದ್ದಾರೆ. 80 ಸಿಬಂದಿಯನ್ನು ರಕ್ಷಣೆ ಮಾಡಲಾಗಿದ್ದು, ಇಬ್ಬರು ಪತ್ತೆಯಾಗಿಲ್ಲ. ಅವರನ್ನು ರಕ್ಷಿಸಲಾಗಿದೆಯೇ ಅಥವಾ ನಾಪತ್ತೆಯಾಗಿದ್ದಾರೆಯೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಓರಿಯಂಟಲ್ ಮಿಂಡೋರೊ ಪ್ರಾಂತ್ಯದ ಕ್ಯಾಲಪಾನ್ ನಗರದಿಂದ ದೋಣಿ ಆಗಮಿಸಿತ್ತು. ಎರಡನೇ ಡೆಕ್ನಿಂದ ಹೊಗೆ ಹೊರ ಹೊಮ್ಮಿ ಸ್ವಲ್ಪ ಹೊತ್ತಿನಲ್ಲೇ ಜ್ವಾಲೆ ಆವರಿಸಿಕೊಂಡಿತು. ಪಾದದ ಅಡಿಯಿಂದ ಶಾಖ ಮುಟ್ಟಿತು. ಕೂಡಲೇ ನೀರಿಗೆ ಜಿಗಿಯಬೇಕಾಯಿತು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.
ದೋಣಿಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದೆ.