ಕೊಲಂಬೋ, ಆ 28 (DaijiworldNews/DB): ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಆಹಾರ ವಸ್ತುಗಳ ಬೆಲೆ ಏರಿಕೆಯಾದ್ದರಿಂದ ಬಡ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳು ಹಸಿದ ಹೊಟ್ಟೆಯಲ್ಲಿ ದಿನದೂಡುತ್ತಿವೆ ಮಕ್ಕಳ ಪರಿಸ್ಥಿತಿ ಕಳವಳಕಾರಿಯಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಅಂಗವಾಗಿರುವ ಯುನಿಸೆಫ್ ದಕ್ಷಿಣ ಏಷ್ಯಾ ನಿರ್ದೇಶಕ ಲರಿಯಾ ಅಡ್ಜೀ ಹೇಳಿದ್ದಾರೆ.
ಸದ್ಯ ಶ್ರೀಲಂಕಾ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಜನಸಾಮಾನ್ಯರ ಜೀವನ ದುಸ್ತರವಾಗಿದೆ. ಮಕ್ಕಳು ಬರಿಹೊಟ್ಟೆಯಲ್ಲಿ ಮಲಗುತ್ತಿದ್ದಾರೆ. ಮುಂದೆ ಏಷ್ಯಾದ ಇತರ ರಾಷ್ಟ್ರಗಳಲ್ಲಿಯೂ ಈ ಪರಿಸ್ಥಿತಿ ಉಂಟಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
ಶ್ರೀಲಂಕಾದಲ್ಲಿ ಅಕ್ಕಿ, ಬೇಳೆ, ಖಾದ್ಯ ತೈಲ ಮತ್ತು ಇತರ ಸರಕುಗಳ ಬೆಲೆ ಗಗನಕ್ಕೇರಿದೆ. ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಸದ್ಯ ಅಲ್ಲಿನ ಸರ್ಕಾರ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯೊಂದಿಗೆ ಮಾತುಕತೆ ನಡೆಸುತ್ತಿದೆ. ಇಂತಹ ಆರ್ಥಿಕ ಅನಿಶ್ಚಿತತೆಗಳು ಮಕ್ಕಳ ಪ್ರಾಣಕ್ಕೆ ಅಪಾಯ ಉಂಟು ಮಾಡುತ್ತವೆ. ಅಪೌಷ್ಠಿಕತೆಯೂ ಹೆಚ್ಚುತ್ತಿದೆ. ಅಂಕಿ ಅಂಶಗಳ ಪ್ರಕಾರ ಲಂಕಾದ ಶಿಶುವಿಹಾರಗಳಲ್ಲಿ ದಾಖಲಾಗಿರುವ 5,70,000 ಮಂದಿ ಮಕ್ಕಳ ಪೈಕಿ 1,27,000 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಿರುವ ಸಾಧ್ಯತೆಯಿದೆ. ಶ್ರೀಲಂಕಾದ ಈ ಪರಿಸ್ಥಿತಿ ದಕ್ಷಿಣ ಏಷ್ಯಾದ ಇತರ ರಾಷ್ಟ್ರಗಳಿಗೆ ಎಚ್ಚರಿಕೆ ಗಂಟಯಾಗಿದೆ ಎಂದು ಅಡ್ಡೀ ತಿಳಿಸಿದ್ದಾರೆ.