ಲಂಡನ್, ಸೆ 02 (DaijiworldNews/DB): ಬ್ರಿಟನ್ ಪ್ರಧಾನಿ ರೇಸ್ನಲ್ಲಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರ ಹಾದಿ ತೀರಾ ಕಠಿಣವಾಗಿದೆ. ಅವರ ಎದುರಾಳಿ ಅಭ್ಯರ್ಥಿ ಲಿಜ್ ಟ್ರುಸ್ರಿಂದ ಸದ್ಯ ಸಾಕಷ್ಟು ಪೈಪೋಟಿ ವ್ಯಕ್ತವಾಗುತ್ತಿದೆ.
ಬ್ರಿಟನ್ ಪ್ರಧಾನಿ ಹುದ್ದೆಗೆ ಮಾಜಿ ಚಾನ್ಸಲರ್, ಭಾರತ ಮೂಲದ ರಿಷಿ ಸುನಕ್ ಅವರು ಆಯ್ಕೆಯಾಗಲಿದ್ದಾರೆಂದೇ ಇಲ್ಲೀವರೆಗೆ ನಿರೀಕ್ಷಿಸಲಾಗಿತ್ತು. ಇಲ್ಲಿವರೆಗೆ ಮುನ್ನಡೆ ಕಾಯ್ದುಕೊಂಡಿದ್ದ ರಿಷಿಗೆ ಇದೀಗ ಅವರ ಎದುರಾಳಿ, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರುಸ್ ಭಾರೀ ಪೈಪೋಟಿ ನೀಡಿದ್ದು, ಅಂತಿಮ ಸುತ್ತಿನಲ್ಲಿ ಲಿಜ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಲಿಜ್ ಅವರು ರಾಷ್ಟ್ರಾದ್ಯಂತ ಪ್ರವಾಸ, ಚುನಾವಣಾ ಪ್ರಚಾರ, ಟಿವಿ ಡಿಬೇಟ್ಗಳಲ್ಲಿ ಭಾಗವಹಿಸಿ ಪ್ರಧಾನಿ ಹುದ್ದೆಗೆ ಆಯ್ಕೆಗೆ ಸರ್ವ ಪ್ರಯತ್ನಗಳನ್ನು ನಡೆಸಿದ್ದರು. ಆದಾಗ್ಯೂ ಅಂತಿಮ ಸುತ್ತಿನವರೆಗೂ ರಿಷಿ ಮುನ್ನಡೆ ಕಾಯ್ದುಕೊಂಡಿದ್ದರು. ಅಚ್ಚರಿಯ ಬೆಳವಣಿಗೆಯಲ್ಲಿ ಎದುರಾಳಿ ಮುನ್ನಡೆ ಕಾಯ್ದುಕೊಂಡಿರುವುದು ಫಲಿತಾಂಶ ಬದಲಾಗುವ ಸಾಧ್ಯತೆಯನ್ನೂ ಸೃಷ್ಟಿಸಿದೆ.
ಆಗಸ್ಟ್ ತಿಂಗಳಾರಂಭದಲ್ಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಬ್ರಿಟನ್ನ ಕನ್ಸರ್ವೇಟಿವ್ ಪಾರ್ಟಿಯ ಅಂದಾಜು ಎರಡು ಲಕ್ಷ ಟೋರಿ ಸದಸ್ಯರು ಅಂಚೆ ಮತ್ತು ಆನ್ಲೈನ್ ಮೂಲಕ ಮತದಾನ ಪ್ರಕ್ರಿಯೆ ಆರಂಭಿಸಿದ್ದರು. ಇಂದು ಸಂಜೆ ಐದು ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಅಂತಿಮ ಫಲಿತಾಂಶ ಸೋಮವಾರ ಪ್ರಕಟಗೊಳ್ಳಲಿದೆ. ಫಲಿತಾಂಶದ ಮರುದಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮ ರಾಜೀನಾಮೆಯನ್ನು ರಾಣಿ ಎಲಿಜಬೆತ್ ಅವರಿಗೆ ಅಧಿಕೃತವಾಗಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.