ಕೆನಡಾ, ಸೆ 05(DaijiworldNews/MS): ಸರಣಿ ಚೂರಿ ಇರಿತದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿ, 15 ಮಂದಿ ಗಾಯಗೊಂಡ ಘಟನೆ ಕೆನಡಾದ ಸಾಸ್ಕಾಚೆವಾನ್ ಪ್ರಾಂತ್ಯದಲ್ಲಿ ಭಾನುವಾರ ನಡೆದಿದೆ. ಘಟನೆ ಬಳಿಕ ಇಬ್ಬರು ಶಂಕಿತರ ಪತ್ತೆಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.
ಸಾಸ್ಕಾಚೆವಾನ್ನ ರಾಜಧಾನಿ ರೆಜಿನಾ ಪ್ರಾಂತ್ಯದಲ್ಲಿ ಈ ಭೀಕರ ಘಟನೆ ನಡೆದಿದ್ದು ಯಾವ ಕಾರಣಕ್ಕಾಗಿ ಚೂರಿ ಇರಿತ ಹಾಗೂ ಹತ್ಯೆ ನಡೆಸಿದ್ದಾರೆ ಎಂದು ತಿಳಿದುಬಂದಿಲ್ಲ. ದಾಳಿ ನಡೆಸಿದ ಶಂಕಿಸಲಾದ ಇಬ್ಬರು ವ್ಯಕ್ತಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ
ಸ್ಥಳೀಯ ಸಮುದಾಯದ ಜೇಮ್ಸ್ ಸ್ಮಿತ್ ಕ್ರೀ ನೇಷನ್ ಮತ್ತು ಹತ್ತಿರದ ಪಟ್ಟಣವಾದ ವೆಲ್ಡನ್, ಸಾಸ್ಕಾಚೆವಾನ್ನಲ್ಲಿ 10 ಮಂದಿ ಕೊಲೆಯಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ, 15 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ನಾವು ಇಬ್ಬರು ಶಂಕಿತರನ್ನು ಹುಡುಕುತ್ತಿದ್ದೇವೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಪಡೆಯ ಸಹಾಯಕ ಕಮಿಷನರ್ ರೋಂಡಾ ಬ್ಲ್ಯಾಕ್ಮೋರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ
ಶಂಕಿತರನ್ನು ಡೇಮಿಯನ್ ಮತ್ತು ಮೈಲ್ಸ್ ಸ್ಯಾಂಡರ್ಸನ್ ಎಂದು ಗುರುತಿಸಲಾಗಿದ್ದು 30- ಮತ್ತು 31 ವರ್ಷ ವಯಸ್ಸಿನ ವ್ಯಕ್ತಿಗಳಾಗಿರಬಹುದು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.