ವಾಷಿಂಗ್ಟನ್ ಸೆ 09 (DaijiworldNews/MS): ಭಾರತ ಮೂಲದ ಅಮೇರಿಕನ್ ಸಂಸದೆ ಪ್ರಮೀಳಾ ಜಯಪಾಲ್ ಅವರಿಗೆ ಫೋನ್ ಮೂಲಕ ಸ್ವದೇಶಕ್ಕೆ ವಾಪಸ್ ಹೋಗುವಂತೆ ವ್ಯಕ್ತಿಯೊಬ್ಬ ಬೆದರಿಕೆ ಒಡ್ಡಿದ್ದಾನೆ. ಸಂಸದೆಗೆ ನಿಂದನೀಯ ಮತ್ತು ದ್ವೇಷದ ಐದು ಆಡಿಯೋ ಸಂದೇಶಗಳನ್ನು ಗುರುವಾರ ಕಳುಹಿಸಲಾಗಿದೆ.
ಎಲ್ಲಾ ಸಂದೇಶದಲ್ಲೂ ಅಶ್ಲೀಲ ಮತ್ತು ನಿಂದನೀಯ ಪದಗಳು ತುಂಬಿರುವುದರಿಂದ ಅವುಗಳನ್ನು ತಡೆಹಿಡಿಯಲಾಗಿದೆ.
"ಸಾಮಾನ್ಯವಾಗಿ, ರಾಜಕೀಯ ವ್ಯಕ್ತಿಗಳು ತಮ್ಮ ದುರ್ಬಲತೆಯನ್ನು ತೋರಿಸುವುದಿಲ್ಲ. ಹಿಂಸಾಚಾರವನ್ನು ನಮ್ಮ ಹೊಸ ರೂಢಿಯಾಗಿ ಸ್ವೀಕರಿಸಲು ಸಾಧ್ಯವಿಲ್ಲದ ಕಾರಣ ನಾನು ಇದನ್ನು ಪೋಸ್ಟ್ ಮಾಡಲು ನಿರ್ಧರಿಸಿದೆ. ಈ ಹಿಂಸಾಚಾರಕ್ಕೆ ಆಧಾರವಾಗಿರುವ ಮತ್ತು ಪ್ರೇರೇಪಿಸುವ ವರ್ಣಭೇದ ನೀತಿ ಮತ್ತು ಲಿಂಗಭೇದಭಾವವನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ಜಯಪಾಲ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಜುಲೈ ತಿಂಗಳಲ್ಲಿ ಪ್ರಮಿಳಾ ಅವರ ನಿವಾಸದ ಎದುರು ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದು ನಿಂತಿದ್ದ. 'ಭಾರತಕ್ಕೆ ಹೊರಟು ಹೋಗಿ' ಎಂದು ಕೂಗಾಡಿದ್ದ. ಕೊನೆಗೆ ಆತನನ್ನು ಬಂಧಿಸಲಾಗಿತ್ತು.
ಪ್ರಮೀಳಾ ಜಯಪಾಲ್ ಅವರಿಗೆ ಕಳುಹಿಸಿದ ಸಂದೇಶದ ಪೈಕಿ ಒಂದರಲ್ಲಿ ಚೆನ್ನೈ ಮೂಲದ ಸಂಸದೆಯನ್ನು ಭಾರತಕ್ಕೆ ವಾಪಸ್ ಹೋಗುವಂತೆ ಬೆದರಿಕೆ ಒಡ್ಡಲಾಗಿದೆ.