ನ್ಯೂಯಾರ್ಕ್, ಸೆ 11 (DaijiworldNews/DB): ಕೊಳಚೆ ನೀರಿನಲ್ಲಿ ಪೋಲಿಯೊ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ.
ಲಾಂಗ್ ಐಲ್ಯಾಂಡ್ನ ನಸ್ಸೌ ಕೌಂಟಿಯಲ್ಲಿನ ತ್ಯಾಜ್ಯ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಿದಾಗ ಈ ನೀರಿನಲ್ಲಿ ಪೋಲಿಯೋ ವೈರಸ್ ಪತ್ತೆಯಾಗಿದೆ. ವೈದ್ಯರು ಮತ್ತು ಪ್ರಮಾಣಿಕೃತ ನರ್ಸ್ಗಳು ರೋಗಿಗಳಿಗೆ ಪೋಲಿಯೊ ಲಸಿಕೆ ನೀಡಲು ತುರ್ತು ಆದೇಶದಿಂದ ಸಾಧ್ಯ. ಲಸಿಕೆ ನಿರ್ವಾಹಕರನ್ನು ಕೂಡಲೇ ಒಟ್ಟುಗೂಡಿಸಬೇಕೆಂದು ಆದೇಶಿಸಲಾಗಿದೆ. ಗವರ್ನರ್ ಕ್ಯಾಥಿ ಹೊಚುಲ್ ಅವರು ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಆದೇಶಿಸಿದ್ದಾರೆ.
ಮಕ್ಕಳಿಗೆ ಲಸಿಕೆ ಹಾಕದಿದ್ದರೆ ಪಾರ್ಶ್ವವಾಯು ಕಾಯಿಲೆಯ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಲಸಿಕೆ ಪಡೆದುಕೊಳ್ಳದವರು ಶೀಘ್ರ ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ ಯುನೈಟೆಡ್ ಸ್ಟೇಟ್ಸ್ನ ರಾಕ್ಲ್ಯಾಂಡ್ ಕೌಂಟಿಯಲ್ಲಿ ದಶಕದಿಂದೀಚೆಗೆ ಮೊದಲ ಪೋಲಿಯೊ ಪ್ರಕರಣವು ವಯಸ್ಕರಲ್ಲಿ ಕಂಡು ಬಂದಿದೆ ಎಂದು ಮಾಹಿತಿ ಲಭ್ಯವಾಗಿದೆ.