ಸೌದಿ ಅರೇಬಿಯಾ, ಸೆ 13 (DaijiworldNews/DB): ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗುವ ಅರ್ಹತೆ ಹೊಂದಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಸೌದಿ ಅರೇಬಿಯಾ ಮತ್ತು ಭಾರತದ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಲು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ ಅವರು ಅಲ್ಲಿನ ಮಾಧ್ಯಮಗಳೊಂದಿಗೆ ಮಾತನಾಡಿ, ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಆರ್ಥಿಕತೆ, ಪರಮಾಣು ಶಕ್ತಿ, ತಾಂತ್ರಿಕತೆ ಸೇರಿದಂತೆ ಭಾರತ ಎಲ್ಲದರಲ್ಲಿಯೂ ಮುಂಚೂಣಿಯಲ್ಲಿದೆ. ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗಲು ಭಾರತ ಎಲ್ಲಾ ಅರ್ಹತೆಗಳನ್ನು ಹೊಂದಿದೆ ಎಂದವರು ಪ್ರತಿಪಾದಿಸಿದರು.
ಭದ್ರತಾ ಮಂಡಳಿ ಸುಧಾರಿಸುವ ಅಗತ್ಯತೆತೆ ಬಗ್ಗೆ ಜಾಗತಿಕ ಮಟ್ಟದಲ್ಲಿಯೂ ರಾಷ್ಟ್ರಗಳು ಒಲವು ಹೊಂದಿವೆ. ಭದ್ರತಾ ಮಂಡಳಿಯು ಬಲಾಢ್ಯಗೊಳ್ಳುತ್ತಿರುವ ವಿಶ್ವ ಮಟ್ಟದ ಸ್ಥಿತಿಗತಿಗನುಗುಣವಾಗಿ ಹೊಂದಿಕೊಳ್ಳಬೇಕಾದ ಅವಶ್ಯವಿದೆ. ವಿಶ್ವ ನೈಜತೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಇದರಿಂದ ಭಾರತ ಸೇರಿದಂತೆ ಹಲವು ದೇಶಗಳ ಹಿತಾಸಕ್ತಿ ಕಾಯ್ದುಕೊಳ್ಳುವಲ್ಲಿ ಇದು ಪೂರಕವಾಗಲಿದೆ ಎಂದರು.
ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿ ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಂದ ಲಿಖಿತ ಸಂದೇಶವನ್ನು ಹಸ್ತಾಂತರಿಸಿದರು.