ಜಿನೀವಾ, ಸೆ 15 (DaijiworldNews/DB): ಕೋವಿಡ್-19 ಸಾಂಕ್ರಾಮಿಕ ರೋಗವು ಸಂಪೂರ್ಣವಾಗಿ ನಿರ್ಮೂಲನೆಗೊಳ್ಳುವ ಸಮಯ ಹತ್ತಿರದಲ್ಲೇ ಇದೆ. ಈ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲಾ ಅವಕಾಶಗಳನ್ನು ಜಗತ್ತು ಬಳಸಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 60 ಲಕ್ಷ ಜನರನ್ನು ಕೊರೊನಾ ಮಹಾಮಾರಿ ಬಲಿ ತೆಗೆದುಕೊಂಡಿದೆ. ಆದರೆ ಅದನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಯಾವುದೇ ಉತ್ತಮ ಕ್ರಮಗಳ ಆಯ್ಕೆ ನಮ್ಮ ಮುಂದಿರಲಿಲ್ಲ. ಆದರೆ ಸದ್ಯ ಅದು ಅಂತ್ಯಗೊಳ್ಳುವ ಸಮಯ ಬಂದಿದೆ. ಮಹಾಮಾರಿಯ ಶೀಘ್ರ ಅಂತ್ಯಕ್ಕಿರುವ ಎಲ್ಲಾ ಅವಕಾಶಗಳನ್ನು ಜಗತ್ತು ಬಳಸಿಕೊಳ್ಳಬೇಕು ಎಂದರು.
ಅವಕಾಶಗಳನ್ನು ಬಳಸಿಕೊಳ್ಳದಿದ್ದಲ್ಲಿ ಮುಂದೆ ರೂಪಾಂತರಿಗಳು ಅಧಿಕಗೊಳ್ಳುತ್ತವೆ. ಸಾವು ನೋವುಗಳು ಹೆಚ್ಚುತ್ತವೆ. ಅನ್ಚಿತತೆಯೂ ಮುಂದುವರಿಯುವ ಆತಂಕ ಎದುರಾಗುತ್ತದೆ ಎಂದವರು ತಿಳಿಸಿದರು.
ಕಳೆದ ವಾರ ಕೋವಿಡ್ ನಿಂದ ಮರಣ ಪ್ರಮಾಣ ಗಣನೀಯ ಇಳಿಕೆ ಕಂಡಿದೆ. ಪ್ರಕರಣಗಳ ಸಂಖ್ಯೆಯಲ್ಲೂ ಕಡಿಮೆ ಪ್ರಮಾಣ ಇರುವುದು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆಯಾಗಿದೆ. ಶೂನ್ಯ ಪ್ರಕರಣ ದಾಖಲಾಗಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದವರು ಪ್ರತಿಪಾದಿಸಿದರು.