ಮೆಕ್ಸಿಕೋ, ಸೆ 20 (DaijiworldNews/DB): 'ನನಗೆ ಹೃದಯಾಘಾತವಾಗುತ್ತಿದೆ ಎಂದೇ ಭಾವಿಸಿದೆ'. ಇದು ಮೆಕ್ಸಿಕೋದಲ್ಲಿ ನಿನ್ನೆ ಸಂಭವಿಸಿದ ಭೂಕಂಪನದ ಅನುಭವವನ್ನು ಸ್ಥಳೀಯರೊಬ್ಬರು ಹೇಳಿದ ರೀತಿ.
ಪಶ್ಚಿಮ ಮೆಕ್ಸಿಕೋದಲ್ಲಿ ನಿನ್ನೆಯ ಭೂಕಂಪನ ಲ್ಯಾಟಿನ್ ಅಮೇರಿಕನ್ ದೇಶದಲ್ಲಿ ಸಂಭವಿಸಿದ ಮೂರನೇ ಅತಿ ದೊಡ್ಡ ಭೂಕಂಪನವಾಗಿದೆ. 7.7 ತೀವ್ರತೆಯಲ್ಲಿ ಭೂಮಿ ಕಂಪಿಸಿತ್ತು. ಇದರಿಂದಾಗಿ ಕಿಲೋ ಮೀಟರ್ಗಟ್ಟಲೆ ಭೂಮಿ ಕಂಪಿಸಿದ್ದು, ಜನ ತೀವ್ರ ಭಯಭೀತರಾಗಿದ್ದರು. ಭೂಕಂಪನದ ಅನುಭವವನ್ನು ಸ್ಥಳೀಯರ ವ್ಯಕ್ತಿಗಳು ಇಂದು ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ.
ಮೆಕ್ಸಿಕೋ ನಗರದ ನಿವಾಸಿ 58 ವರ್ಷದ ಗೇಬ್ರಿಯೆಲಾ ರಾಮಿರೆಜ್ ಅವರು ಮಾತನಾಡುತ್ತಾ, ದೊಡ್ಡ ಮಟ್ಟದ ಕಂಪನದ ಅನುಭವವಾಯಿತು. ಆದರೆ ಇದು ಭೂಕಂಪನ ಎಂದು ಗೊತ್ತಾಗಲಿಲ್ಲ, ಬದಲಾಗಿ ನನಗೆ ಹೃದಯಾಘಾತವಾಗಿದೆ ಎಂದೇ ಭಾವಿಸಿದೆ ಎಂದರು.
ಆರೇಳು ವರ್ಷದ ಹಿಂದೆ ಸಂಭವಿಸಿದ ಭೂಕಂಪದಲ್ಲಿ ಅನೇಕ ಕಟ್ಟಡಗಳು ಹಾನಿಯಾದರೂ ಅವುಗಳನ್ನು ಇನ್ನೂ ದುರಸ್ತಿ ಮಾಡಿಲ್ಲ. ಅದರಲ್ಲಿ ಕೆಲವು ಬಿದ್ದು ಹೋಗಿವೆ. ದುರಸ್ತಿಯಾಗದೇ ಉಳಿದಿರುವ ಕಟ್ಟಡಗಳನ್ನು ಹಾಗೆಯೇ ಬಿಟ್ಟರೆ ಮುಂದೆ ತೊಂದರೆ ಹೆಚ್ಚು ಎನ್ನುತ್ತಾರೆ ಅವರು.
ಇನ್ನು 73 ವರ್ಷದ ಲಾರಾ ರೆಸೆಂಡಿಜ್ ಅವರ ಪ್ರಕಾರ, ಇದೊಂದು ಭಯಾನಕ ಅನುಭವವಾಗಿದೆ. ಇಂತಹ ಅನುಭವ ಈ ಹಿಂದೆಯೂ ಆಗಿರಲಿಲ್ಲ ಎಂದು ಅನುಭವ ಬಿಚ್ಚಿಟ್ಟರು.ಭೂಕಂಪದಿಂದಾಗಿ ಪಶ್ಚಿಮ ರಾಜ್ಯ ಕೊಲಿಮಾದ ಮಂಜನಿಲ್ಲೊದಲ್ಲಿನ ಶಾಪಿಂಗ್ ಸೆಂಟರ್ವೊಂದರಲ್ಲಿ ವ್ಯಕ್ತಿಯೊಬ್ಬ ಅವಶೇಷಗಳಡಿ ಬಿದ್ದು ಮೃತಪಟ್ಟಿದ್ದಾನೆ. ಉಳಿದಂತೆ ಮೆಕ್ಸಿಕೊ ನಗರದಲ್ಲಿ ದೊಡ್ಡ ಮಟ್ಟದ ಹಾನಿ ಉಂಟಾಗಿಲ್ಲ ಎಂದು ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ತಿಳಿಸಿರುವುದಾಗಿ ವರದಿಯಾಗಿದೆ.