ಟೆಹ್ರಾನ್, ಸೆ 21 (DaijiworldNews/DB): ಇರಾನ್ನಲ್ಲಿ ಹಿಜಾಬ್ ವಿರುದ್ದದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಭದ್ರತಾ ಪಡೆಗಳು ನಡೆಸದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ.
ಸರಿಯಾಗಿ ಹಿಜಾಬ್ ಧರಿಸಿಲ್ಲವೆಂದು ಬಂಧಿತಳಾಗಿ ಬಳಿಕ ಠಾಣೆಯಲ್ಲೇ ಕೋಮಾಕ್ಕೆ ಜಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಮಹ್ಸಾ ಅಮಿನಿ ಎಂಬಾಕೆಯ ಸಾವು ಪ್ರಕರಣ ಸಂಬಂಧ ಆಕ್ರೋಶಗೊಂಡಿರುವ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಮಂದಿ ಮಹಿಳೆಯರು ಕುರ್ದಿಸ್ತಾನ್ನಲ್ಲಿ ಪ್ರತಿಭಟನೆ ನಡೆಸುವ ವೇಲೆ ಕಾರುಗಳ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದರು. ಅಲ್ಲದೆ ಕೆಲವರು ಕೂದಲು ಕತ್ತರಿಸಿಕೊಂಡು, ಹಿಜಾಬ್ ಸುಟ್ಟು ಪ್ರತಿಭಟನೆ ನಡೆಸಿದರು. ಈ ವೇಳೆ ಭದ್ರತಾ ಸಿಬಂದಿ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಈವರು ಮೃತಪಟ್ಟಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಇರಾನ್ನಲ್ಲಿ ಮಹಿಳೆಯರಿಗೆ ವಸ್ತ್ರ ಸಂಹಿತೆ ಜಾರಿಯಲ್ಲಿದೆ. ಇದನ್ನು ವಿರೋಧಿಸುವುದು ಕಾನೂನು ಪ್ರಕಾರ ಅಪರಾಧವಾಗಿದೆ ಎಂದು ಟೆಹ್ರಾನ್ ಪೊಲೀಸ್ ವರಿಷ್ಠಾಧಿಕಾರಿ ಹುಸೈನ್ ರಹಿಮಿ ತಿಳಿಸಿರುವುದಾಗಿ ವರದಿಯಾಗಿದೆ.
ಇನ್ನು ಇರಾನ್ನ ಮೆಹ್ಸಾ ಸಾವು ಪ್ರಕರಣವನ್ನು ಯುರೋಪಿಯನ್ ಒಕ್ಕೂಟ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳು ಖಂಡಿಸಿವೆ. ಅಲ್ಲದೆ ಅಧಿಕಾರಿಗಳು ದೇಶದ ಪ್ರಜೆಗಳ ಹಕ್ಕನ್ನು ಗೌರವಿಸುವುದರೊಂದಿಗೆ ಪ್ರಜೆಗಳ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿವೆ.