ಅಮೆರಿಕಾ, ಸೆ 22 (DaijiworldNews/DB): ಹುದ್ದೆಯಲ್ಲಿ ಮುಂಭಡ್ತಿ ನೀಡಿಲ್ಲವೆಂಬ ಕಾರಣಕ್ಕೆ ಕಂಪೆನಿ ಬಾಸ್ನ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಆರೋಪಿಯನ್ನು ಘಟನೆ ನಡೆದು ಎಂಟು ವರ್ಷಗಳ ಬಳಿಕ ಬಂಧಿಸಲಾಗಿದೆ.
ಫಾಂಗ್ ಎಂಬಾತ ಬಂಧಿತ ಆರೋಪಿ. 2014 ರ ಜನವರಿಯಲ್ಲಿ ಯುನೈಟೆಡ್ ಸ್ಟೇಟ್ಸ್ನ ಹೂಸ್ಟನ್ನಲ್ಲಿ ಘಟನೆ ನಡೆದಿತ್ತು. ಆರೋಪಿಯು ಬಾಸ್ ಮನೆಗೆ ಆಗಮಿಸಿ ಕಂಪೆನಿ ಬಾಸ್ ಮಾಯೋ ಸನ್, ಪತ್ನಿ ಮೆಕ್ಸಿ ಸನ್, ಮಕ್ಕಳಾದ ತಿಮೋತಿ ಸನ್ ಮತ್ತು ಟೈಸನ್ ಸನ್ ಅವರನ್ನು ಗುಂಡು ಹೊಡೆದು ಕೊಂದಿದ್ದ. ಮಾಯೋ ಸನ್ ಅವರ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಫಾಂಗ್ಗೆ ಬಾಸ್ ಮುಂಭಡ್ತಿ ನೀಡಿರಲಿಲ್ಲ ಎಂಬ ಕಾರಣಕ್ಕೆ ಆತ ಈ ರೀತಿಯ ಕೃತ್ಯ ಎಸಗಿದ್ದ ಎಂದು ತಿಳಿದು ಬಂದಿತ್ತು.
ಕಚೇರಿಯಲ್ಲಿ ಫಾಂಗ್ ವರ್ತನೆ ಬಗ್ಗೆ ಅಸಮಾಧಾನವಿದ್ದ ಕಾರಣ ಮಾಯೋ ಮುಂಭಡ್ತಿಗೆ ಆತನ ಹೆಸರು ಶಿಫಾರಸ್ಸು ಮಾಡಲು ಒಪ್ಪಿರಲಿಲ್ಲ ಎನ್ನಲಾಗಿದೆ. ಆದರೆ ಇದರಿಂದ ಕುಪಿತನಾಗಿದ್ದ ಫಾಂಗ್ ಬಾಸ್ನ ಇಡೀ ಕುಟುಂಬವನ್ನು ಹತ್ಯೆಗೈದು ಚೀನಾಗೆ ಪರಾರಿಯಾಗಿದ್ದ. ಎಂಟು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆತ ಇದೀಗ ಕ್ಯಾಲಿಫೋರ್ನಿಯಾದ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದರು.